ಇಡುಕ್ಕಿ(ಕೇರಳ) : ಬಾಲ್ಯದಲ್ಲಿ ಬೀದಿ ದೀಪಗಳ ಅಡಿಯಲ್ಲಿ ಅಧ್ಯಯನ ಮಾಡಿದ ಅನೇಕ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ನಾವು ಕಲಿತಿದ್ದೇವೆ. ಆದೇ ರೀತಿ ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಲದಿಂದ ಓದುವ ಆಸಕ್ತಿ ಇರುವ ವಿದ್ಯಾರ್ಥಿನಿಯರ ಗುಂಪೊಂದು ನೆಟ್ವರ್ಕ್ ಹುಡುಕಿಕೊಂಡು ಮನೆಯಿಂದ ಕಿಲೋಮೀಟರ್ ಗಟ್ಟಲೇ ದೂರ ತೆರಳುವುದು ಸಾಮಾನ್ಯವಾಗಿದೆ.
ವಿದ್ಯಾರ್ಥಿನಿಯರು ಆನ್‌ಲೈನ್ ಕ್ಲಾಸ್ ಕೇಳುವ ಸಲುವಾಗಿ ದುಬಾರಿಯಾದರೂ ಸರಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಹೊಂದಿಸಿಕೊಂಡಿದ್ದಾರೆ. ಜೊತೆಗೆ ವಿದ್ಯುತ್ ಸಂಪರ್ಕವೂ ಚೆನ್ನಾಗಿಯೇ ಇದೆ. ಆದರೆ, ಆ ಊರಿನಲ್ಲಿ ಅಂತರ್ಜಾಲದ ಸಮಸ್ಯೆ ಇರುವುದರಿಂದ ಕಿಲೋಮೀಟರ್‌ಗಟ್ಟಲೇ ಸಾಗಿ ರಸ್ತೆ ಬದಿಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ವಿದ್ಯಾರ್ಥಿನಿಯರು ಬೆಳಗ್ಗೆ ಬೇಗನೆ ತಮ್ಮ ಮನೆಗಳಿಂದ ತಮ್ಮ ಪುಸ್ತಕಗಳು, ಲ್ಯಾಪ್‌ಟಾಪ್‌ಗಳು ಮತ್ತು ತಿನ್ನಲು ಆಹಾರ ಹೊತ್ತುಕೊಂಡು ನಡೆಯಲಾರಂಭಿಸುತ್ತಾರೆ. ಸುಮಾರು 6 ಕಿಲೋಮೀಟರ್ ನಡೆದು ರಸ್ತೆಯ ಪಕ್ಕದಲ್ಲಿ ಕುಳಿತು ಮಳೆ, ಚಳಿ, ಗಾಳಿಯನ್ನೂ ಲೆಕ್ಕಿಸದೆ ಕುಳಿತು ಆನ್‌ಲೈನ್ ತರಗತಿಗಳನ್ನು ಕೇಳುತ್ತಾರೆ.
ಇನ್ನೊಂದೆಡೆ ಇಂಟರ್ನೆಟ್ ಸಮಸ್ಯೆಯಿಂದಾಗಿ ಆನ್‌ಲೈನ್ ತರಗತಿಗಳನ್ನು ಸರಿಯಾಗಿ ಬಳಸಿಕೊಳ್ಳಲಾಗದ ಹಿನ್ನೆಲೆ ಅನೇಕ ವಿದ್ಯಾರ್ಥಿಗಳು ಈ ವರ್ಷ ಅಧ್ಯಯನವನ್ನು ಕೈಬಿಟ್ಟಿದ್ದಾರೆ. ಖಾಸಗಿ ಅಂತರ್ಜಾಲ ಸೇವಾ ಪೂರೈಕೆದಾರರು ಅಥವಾ ಇತರರ ಮೂಲಕ ರಾಜಮಲದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಸರ್ಕಾರ ಮಧ್ಯಪ್ರವೇಶಿಸಿದರೆ ಹೆಚ್ಚಿನ ಲಾಭವಾಗುತ್ತದೆ.