ನವದೆಹಲಿ: ಪಾನ್ ಕಾರ್ಡ್ ಕಡ್ಡಾಯವಾಗಿರುವ ಇಂದಿನ ದಿನಗಳಲ್ಲಿ ಅದನ್ನು ಮಾಡಿಸಿಕೊಳ್ಳಲು ಏಜೆನ್ಸಿಗಳ ಮೂಲಕ ಕಷ್ಟಪಡುವವರಿಗೆ ಆದಾಯ ತೆರಿಗೆ ಇಲಾಖೆ ಸುಲಭದ ದಾರಿ ತೋರಿಸಿದೆ.
ಈ ಮೊದಲಿನಂತೆ ವಾರಗಟ್ಟಲೇ ಕಾದು ಪಾನ್ ಕಾರ್ಡ್ ಪಡೆಯುವಂತಿಲ್ಲ. ಯಾವುದೇ ಶುಲ್ಕವಿಲ್ಲದೇ ಕೆಲವೇ ಸೆಕೆಂಡುಗಳಲ್ಲಿ ಆನ್ಲೈನ್ ಮುಖಾಂತರ ಪಾನ್ ಕಾರ್ಡ್ ಮಾಡಿಸಿಕೊಳ್ಳಬಹುದು.
NSDL ವೆಬ್ಸೈಟ್ಗೆ ಭೇಟಿ ನೀಡಿ
ಆದಾಯ ಇಲಾಖೆ ಅಭಿವೃದ್ಧಿಪಡಿಸಿರುವ www.tin-nsdl.com ವೆಬ್ ತಾಣಕ್ಕೆ ಭೇಟಿ ಕೊಟ್ಟು, ಫಾರ್ಮ್ 49ಎ ಅಥವಾ ಫಾರ್ಮ್ 49ಎಎ ಮೂಲಕ ಅರ್ಜಿ ಸಲ್ಲಿಸಬಹುದು. ಅಲ್ಲಿ ಒದಗಿಸಲಾಗಿರುವ ಸರಿಯಾದ ವಿಧಾನಗಳನ್ನು ಆಯ್ಕೆ ಮಾಡಿ. ಅರ್ಜಿದಾರರು ಶ್ವೇತ ವರ್ಣ ಹಿನ್ನೆಲೆಯ 3.5x 2.5 ಸೆ.ಮೀ. ಸುತ್ತಳತೆಯ ಭಾವಚಿತ್ರ, ಐಡಿ ದಾಖಲೆ, ವಿಳಾಸ, ಜನ್ಮದಿನಾಂಕ ನಮೂದಿಸಿ ಆಧಾರ್ ಕಾರ್ಡ್, ಪಾಸ್ಪೋರ್ಟ್, ಚಾಲನ ಪರವಾನಿಗೆ (ಯಾವುದಾದರು ಒಂದು) ಪ್ರತಿಯನ್ನು ಅಪ್ಲೋಡ್ ಮಾಡಬೇಕು. ಮೊಬೈಲ್ ಹಾಗೂ ಮಿಂಚಂಚೆ(Email ID) ಒದಗಿಸುವುದು ಕಡ್ಡಾಯ.
ಆನ್ಲೈನ್ ಅಪ್ಲಿಕೇಷನ್ ಸಲ್ಲಿಸಿದ ಬಳಿಕ ಡಿಜಿಟಲ್ ಸಹಿ ಒದಗಿಸಬೇಕು. ಎಲ್ಲ ವಿವರ ಸಲ್ಲಿಸಿ ಸಮ್ಮತಿ ಆಯ್ಕೆ ನೀಡಿದ ಬಳಿಕ 15 ಸಂಖ್ಯೆಯ ಸ್ವೀಕೃತಿ ನಂಬರ್ ನಮೋದಿತ ಮೊಬೈಲ್ಗೆ ಬರುತ್ತದೆ. ಈ ಸಂಖ್ಯೆಗಳನ್ನು ಖಚಿತಪಡಿಸಿದ ನಂತರ ಭವಿಷ್ಯದಲ್ಲಿ ಕಾರ್ಡ್ನ ಸ್ಥಿತಿಗತಿ ತಿಳಿದುಕೊಳ್ಳಬಹುದು.
ಆಫ್ಲೈನ್ ಫಾರ್ಮ್
ಸರಿಯಾದ ಮಾಹಿತಿಯನ್ನು ತುಂಬಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿದ ನಂತರ ಫಾರ್ಮ್ ಸಮ್ಮತಿ ನೀಡಬೇಕು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸುವವರು NSDL ವೆಬ್ಸೈಟ್ನಿಂದ ಫಾರ್ಮ್ ಡೌನ್ಲೋಡ್ ಮಾಡಿ ವಿವರಗಳನ್ನು ತುಂಬಿ,ನಂತರ ಪೂರಕ ದಾಖಲಾತಿಗಳೊಂದಿಗೆ ಹತ್ತಿರದ ಪಾನ್ ಸೇವಾ ಕೇಂದ್ರಕ್ಕೆ ಸಲ್ಲಿಸಬೇಕು.
ಅರ್ಜಿದಾರರ ಸ್ಟೇಟಸ್
ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ಅಪ್ಲಿಕೇಷನ್ ಸಂಖ್ಯೆಯ ರೂಪದಲ್ಲಿ 15 ಅಂಕಿಗಳ ಸ್ವೀಕೃತಿಯನ್ನು ಪಡೆಯುತ್ತೀರಿ. ಆ ಸ್ವೀಕೃತಿ ಮೂಲಕ ನಿಮ್ಮ ಅರ್ಜಿಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದು.
ಇ-ಪ್ಯಾನ್
ಈ ಹಿಂದೆ ಅರ್ಜಿ ಸಲ್ಲಿಸಿದ್ದ 10-15 ದಿನಗಳ ನಂತರ ಪಾನ್ ಕಾರ್ಡ್ ಪಡೆಯಬಹುದಾಗಿತ್ತು. ಇಂದು ಅರ್ಜಿ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಇ-ಪ್ಯಾನ್ ಲಭ್ಯವಾಗುತ್ತದೆ. ಬಳಿಕ ನೀವು ನೀಡಿದ ವಿಳಾಸಕ್ಕೆ ಪ್ಯಾನ್ ಕಾರ್ಡ್ ಅಂಚೆ ಮೂಲಕ ತಲುಪುತ್ತದೆ.