ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಅತ್ಯಂತ ಕಠಿಣ ಹುದ್ದೆ ಎಂದೇ ಪರಿಭಾವಿಸಲಾಗುವ ವಿದೇಶಾಂಗ ಖಾತೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದ ಸುಷ್ಮಾ ಸ್ವರಾಜ್, ಆ ಹುದ್ದೆಯ ಘನತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದರು.
ಟ್ವಿಟರ್ ಮೂಲಕ ಸಹಾಯ ಬೇಡಿದವರಿಗೆ ತಕ್ಷಣವೇ ಸ್ಪಂದಿಸುತ್ತಿದ್ದ ಸುಷ್ಮಾ ಸ್ವರಾಜ್, ತಾವು ವಿದೇಶಾಂಗ ಸಚಿವೆಯಾಗಿದ್ದಾಗ ಮಾಡಿದ ಅದೊಂದು ಕಾರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಆ ಘಟನೆಯ ಸಂಪೂರ್ಣ ವಿವರಗ ಇಲ್ಲಿದೆ...
ಆಕೆಯ ಹೆಸರು ಗೀತಾ... ಬಿಹಾರ ಮೂಲದ ಆಕೆ 11ನೇ ವಯಸ್ಸಿಗೆ ಅರಿವಿಲ್ಲದೆ ಭಾರತ ಗಡಿ ದಾಟಿ ಪಾಕಿಸ್ತಾನ ಸೇರಿದ್ದಳು. ತಾಯ್ನಾಡು ತೊರೆದಿದ್ದ ಗೀತಾಳನ್ನು ಮತ್ತೆ ಭಾರತಕ್ಕೆ ಮರಳಿ ತಂದಿದ್ದೇ ಸುಷ್ಮಾ ಸ್ವರಾಜ್ ಎನ್ನುವ ದಿಟ್ಟ ಹೆಣ್ಣು ಶಕ್ತಿ.
ಸುಮಾರು ಹತ್ತು ವರ್ಷ ಪಾಕಿಸ್ತಾನದಲ್ಲಿದ್ದ ಗೀತಾ ಕಿವುಡಿ ಹಾಗೂ ಮೂಗಿಯಾಗಿದ್ದಳು. 2003ರಲ್ಲಿ ಪಾಕ್ ಗಡಿ ಪ್ರವೇಶಿಸಿದ್ದ ಗೀತಾಗಳನ್ನು ಲಾಹೋರ್ನಲ್ಲಿನ ರೇಂಜರ್ಸ್ ಗಮನಿಸಿದ್ದರು. ನಂತರದಲ್ಲಿ ಈಕೆಯನ್ನು ಇದಿ ಫೌಂಡೇಶನ್ಗೆ ಹಸ್ತಾಂತರಿಸಲಾಗಿತ್ತು. ಇದಿ ಫೌಂಡೇಶನ್ ನಡೆಸುತ್ತಿದ್ದ ಬಿಲ್ಕ್ವಿಸ್ ಇದಿ ಈಕೆಗೆ ಗೀತಾ ಎಂದು ನಾಮಕರಣ ಮಾಡುತ್ತಾರೆ.
2015ರ ಅಕ್ಟೋಬರ್ 28ರಂದು ಗೀತಾಳನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತರಲಾಯಿತು. ಮಾಧ್ಯಮದ ಸಮ್ಮುಖದಲ್ಲಿ ಪಾಕಿಸ್ತಾನದ ಹೈಕಮೀಷನರ್ ಮನ್ಜೂರ್ ಅಲಿ ಖಾನ್ ಮೆನನ್, ಗೀತಾಳನ್ನು ಭಾರತಕ್ಕೆ ಹಸ್ತಾಂತರಿಸಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಅಲ್ಲಿಂದ ಗೀತಾ ನೇರವಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಳು.
ಗೀತಾಳನ್ನು ಭಾರತಕ್ಕೆ ಕರೆತಂದ ಬಳಿಕ ಸುಷ್ಮಾ ಸ್ವರಾಜ್ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಆಕೆಯನ್ನು 'ಹಿಂದೂಸ್ತಾನದ ಪುತ್ರಿ' ಎಂದು ಖುಷಿಯಿಂದ ಹೇಳಿದ್ದರು.
ನಂತರದಲ್ಲಿ ಗೀತಾಳ ಓದಿನ ಖರ್ಚನ್ನು ಸುಷ್ಮಾ ಸ್ವರಾಜ್ ಅವರೇ ಭರಿಸಿದ್ದರು. ಆಕೆಯ ಹೆತ್ತವರನ್ನು ಪತ್ತೆ ಹಚ್ಚಲು ಸುಷ್ಮಾ ಸ್ವರಾಜ್ ಸಾಕಷ್ಟು ಪ್ರಯತ್ನ ಮಾಡಿದ್ದರು. ಗೀತಾ ಹೆತ್ತವರನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ಬಹುಮಾನವನ್ನೂ ಸುಷ್ಮಾ ಘೋಷಿಸಿದ್ದರು.