ನವದೆಹಲಿ: ಆರ್ಥಿಕ ವೃದ್ಧಿ ದರ ಕಲೆಹಾಕುವ ವಿಧಾನದಲ್ಲಿ ಬದಲಾವಣೆ ಮಾಡಿದ್ದರಿಂದ ದೇಶಿ ಆರ್ಥಿಕತೆಯ ಬೆಳವಣಿಗೆ ದರವು ತಪ್ಪಾಗಿ ಬಿಂಬಿತವಾಗಿದೆ ಎಂದು ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ಅಭಿಪ್ರಾಯಪಟ್ಟಿದ್ದಾರೆ,
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಕಟಿಸಲಾಗಿರುವ ಅವರ ಸಂಶೋಧನಾ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. 2019ರ ಮೇ ತಿಂಗಳಲ್ಲಿ ತಮ್ಮ ಸೇವಾವಧಿ ವಿಸ್ತರಣೆಯ ಅವಧಿ ಕೊನೆಗೊಳ್ಳುವ ಮೊದಲೇ ಅರವಿಂದ್ ಅವರು ತಮ್ಮ ಹುದ್ದೆ ತೊರೆದಿದ್ದರು.
ದೇಶದ ಒಟ್ಟು ಆಂತರಿಕ ಉತ್ಪಾದನೆಯನ್ನು ಶೇ 2.5ರಷ್ಟು ಹೆಚ್ಚುವರಿಯಾಗಿ ಅಂದಾಜು ಮಾಡಲಾಗಿದೆ. 2011-12ರಿಂದ 2016-17ರ ಅವಧಿಯಲ್ಲಿನ ಸರ್ಕಾರದ ಅಧಿಕೃತ ಅಂದಾಜು ಆಗಿರುವ ಶೇ. 7ರಷ್ಟು ವೃದ್ಧಿದರ ಬದಲಿಗೆ ಅದು ವಾಸ್ತವದಲ್ಲಿ ಶೇ 4.5ರಷ್ಟು ಇರಬೇಕಾಗಿತ್ತು ಎಂದು ಹೇಳಿದ್ದಾರೆ. 2001-02ರಿಂದ 2017-18ರ ಅವಧಿಯಲ್ಲಿನ 17 ಪ್ರಮುಖ ಆರ್ಥಿಕ ಮಾನದಂಡಗಳನ್ನು ಆಧರಿಸಿದ ವಿಶ್ಲೇಷಣೆ ಮಾಡಿದ್ದಾರೆ. ತಮ್ಮ ಈ ವಿಶ್ಲೇಷಣೆಗೆ ಪೂರಕವಾಗಿ ಅರವಿಂದ ಅವರು, ಆರ್ಥಿಕತೆ ಕುಸಿತವಾಗಿರುವುದನ್ನು ಸಾಕ್ಷ್ಯವಾಗಿ ಒದಗಿಸಿದ್ದಾರೆ.
ತಯಾರಿಕಾ ವಲಯದ ಪ್ರಗತಿಗೆ ಸಂಬಂಧಿಸಿದಂತೆ ತಪ್ಪು ಲೆಕ್ಕಾಚಾರ ಹಾಕಲಾಗಿದೆ. ಇದರಿಂದಾಗಿ ಆರ್ಥಿಕತೆಗೆ ಸಂಬಂಧಿಸಿದ ನೀತಿಯು ಕಠಿಣವಾಗಿರಲಿದೆ. ಆರ್ಥಿಕ ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರುವುದಕ್ಕೆ ಅಡಚಣೆಗಳು ಎದುರಾಗಲಿವೆ ಎಂದು ಹೇಳಿದ್ದಾರೆ.