ಮನೆಯೊಳಗೂ ಪ್ಲಾಸ್ಟಿಕ್. ಆಚೆ ಹೋದರೂ ಎಲ್ಲೆಡೆ ಕಾಣೋದು ಇದೇ ಪ್ಲಾಸ್ಟಿಕ್ ಅನ್ನೋ ಮಹಾಮಾರಿ. ಛತ್ತೀಸ್‌ಗಢ್‌ದಲ್ಲಿ ಪ್ಲಾಸ್ಟಿಕ್‌ಗೆ ಮುಕ್ತಿ ಹಾಡೋಕೆ ಹೊಸ ಐಡಿಯಾ ಮಾಡಲಾಗಿದೆ. ಇದರ ಜತೆಗೆ ಹಸಿದವರ ಹೊಟ್ಟೆ ತುಂಬಿಸಲಾಗ್ತಿದೆ.
ನಾವು ಇಲ್ಲಿಗೆ ಪ್ಲಾಸ್ಟಿಕ್ ತಂದುಕೊಡ್ತೀವಿ. ಇವರು ನಮಗೆ ಉಪಹಾರ ಜತೆಗೆ ಊಟದ ಕೂಪನ್ ಕೊಡ್ತಾರೆ ಅಂತಿದಾರೆ ಇಲ್ಲಿರುವ ಚಿಂದಿ ಆಯುವವರು. ಪ್ಲಾಸ್ಟಿಕ್ ಆಯೋರಿಗೆ ಹೊಟ್ಟೆ ತುಂಬಾ ರುಚಿಕರ ಊಟ. ಪ್ಲಾಸ್ಟಿಕ್ ಎಂಬ ಮಹಾಮಾರಿ ನಿರ್ಮೂಲನೆಗೆ ಛತ್ತೀಸ್ಗಢ ರಾಜ್ಯದ ಅಂಬಿಕಾಪುರ ಮುನ್ಸಿಪಲ್ ಕಾರ್ಪೊರೇಶನ್ ಜಾರಿಗೆ ತಂದಿರುವ 'ಗಾರ್ಬೇಜ್ ಕೆಫೆ' ಪರಿಕಲ್ಪನೆ ಇಡೀ ದೇಶದಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಅಕ್ಟೋಬರ್ 9ರಂದು ಜಾರಿಗೆ ಬಂದ ಈ ಕೆಫೆಯಲ್ಲಿ, 1 ಕೆಜಿ ಪ್ಲಾಸ್ಟಿಕ್ ತಂದು ಕೊಟ್ಟೋರು ಯಾರೇ ಆಗಲಿ ಅವರಿಗೆ ಫುಲ್ಮೀಲ್ಸ್ ಊಟ ಸಿಗುತ್ತೆ. ಹೀಗಾಗಿ ಗಾರ್ಬೇಜ್ ಕೆಫೆಯಲ್ಲಿ ನಿತ್ಯ 10 ರಿಂದ 20 ಕೆಜಿ ಪ್ಲಾಸ್ಟಿಕ್ ಸಂಗ್ರಹವಾಗ್ತಿದೆ.
ಹೀಗೆ ಸಂಗ್ರಹಿಸಿದ ಪ್ಲಾಸ್ಟಿಕ್‌ನ ಕಾರ್ಪೊರೇಶನ್ನ ನೈರ್ಮಲ್ಯ ಉದ್ಯಾನ ಮರುಬಳಕೆ ಕೇಂದ್ರಕ್ಕೆ ರವಾನಿಸಲಾಗುತ್ತೆ. ತ್ಯಾಜ್ಯ ಬಳಸಿ ರಸ್ತೆಗಳಿಗೆ ಡಾಂಬರು ಹಾಕುವ ಗುರಿಯನ್ನು ಅಂಬಿಕಾಪುರ ಮಹಾನಗರ ಪಾಲಿಕೆ ಹೊಂದಿದೆ. ವಿಶೇಷ ಅಂದ್ರೆ ಈ ಕೆಫೆಯನ್ನು ಮಹಿಳಾ ಸ್ವ-ಸಹಾಯ ಗುಂಪುಗಳು ನಿರ್ವಹಿಸುತ್ತಿವೆ. ಇದರಿಂದ ಮಹಿಳೆಯರಿಗೂ ಹೆಚ್ಚಿನ ಉದ್ಯೋಗಾವಕಾಶ ನೀಡಲಾಗ್ತಿದೆ.
ಹೀಗಾಗಿ ಊಟದ ಜತೆ ಉದ್ಯೋಗವನ್ನು ನೀಡುತ್ತಿರುವ ಗಾರ್ಬೇಜ್ ಕೆಫೆ ದಿನದಿಂದ ದಿನಕ್ಕೆ ಎಲ್ಲರ ಮನ್ನಣೆ ಗಳಿಸುತ್ತಿದೆ. ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ 'ಗಾರ್ಬೇಜ್ ಕೆಫೆ'ಗೆ ಚಿಂದಿ ಆಯುವವರಿಂದ ಹಿಡಿದು ಉದ್ಯಮಿಗಳವರೆಗೆ ಪ್ರತಿಯೊಬ್ಬರೂ ತಮ್ಮದೇ ಕೊಡುಗೆ ನೀಡುತ್ತಿದಾರೆ. ಎಲ್ಲೆಡೆ ಈ ರೀತಿಯಾದ್ರೆ ಪ್ಲಾಸ್ಟಿಕ್ ಅನ್ನೋ ಮಹಾಮಾರಿಗೆ ಮುಕ್ತಿ ಸಾಧ್ಯ..