ಹೈದರಾಬಾದ್: ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿ ನಾಲ್ವರು ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.
14 ವರ್ಷದ ಬಾಲಕಿ ಮತ್ತು ಬೀದಲ್ಬಸ್ತಿ ನಿವಾಸಿ ಶಿವಕುಮಾರ್ (23) ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು. ಲಾಂಗ್ಡ್ರೈವ್ ಹೆಸರಲ್ಲಿ ಬಾಲಕಿಯನ್ನು ಅನೇಕ ಬಾರಿ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಲಕಿಯ ನಗ್ನ ಚಿತ್ರಗಳನ್ನು ತನ್ನ ಮೊಬೈಲ್ನಲ್ಲಿ ಸೆರೆಹಿಡಿದ್ದಾನೆ. ಬಳಿಕ ಶಿವುಕುಮಾರ್ ಅವುಗಳನ್ನು ಬಾಲಕಿಗೆ ತೋರಿಸಿ ವರ್ಷಗಳಿಂದ ಕಿರುಕುಳ ನೀಡುತ್ತಾ ಬಂದಿದ್ದಾನೆ.
ನಾನು ಹೇಳಿದ ಸ್ಥಳಕ್ಕೆ ಬಂದ್ರೆ ನಗ್ನ ಚಿತ್ರಗಳನ್ನು ಡಿಲೀಟ್ ಮಾಡುವುದಾಗಿ ವಾರದ ಹಿಂದೆ ಶಿವಕುಮಾರ್ ಬಾಲಕಿಗೆ ಹೇಳಿದ್ದಾನೆ. ಆತನ ಮಾತು ನಂಬಿದ ಬಾಲಕಿ ಹಳೇ ಕಟ್ಟಡವೊಂದಕ್ಕೆ ತೆರಳಿದ್ದಾಳೆ. ಅಲ್ಲಿ ಶಿವಕುಮಾರ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾರೆ.
ಅತ್ಯಾಚಾರ ಬಳಿಕ ಬಾಲಕಿ ಮನೆಗೆ ತೆರಳಿದ್ದಾಳೆ. ಮರುದಿನ ಅನಾರೋಗ್ಯಕ್ಕೆ ಗುರಿಯಾಗಿದ್ದರಿಂದ ಕುಟುಂಬಸ್ಥರು ಬಾಲಕಿಗೆ ವಿಚಾರಿಸಿದ್ದಾರೆ. ಬಳಿಕ ನಡೆದ ಘಟನೆ ಬಗ್ಗೆ ಪೋಷಕರಿಗೆ ಹೇಳಿದ್ದಾಳೆ. ಎರಡು ದಿನಗಳ ಹಿಂದೆ ಬಾಲಕಿ ಪೋಷಕರು ಚಿಲಕಲಗೂಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.