ನವದೆಹಲಿ: ಏಪ್ರಿಲ್ 11ರಿಂದ ಆರಂಭವಾಗಲಿರುವ ಲೋಕಸಭೆ ಚುನಾವಣೆಯಲ್ಲಿ ಗಾಂಧಿ ಹಾಗೂ ಗೂಡ್ಸೆ ಎಂಬ ಎರಡು ಆಯ್ಕೆಗಳಿವೆ. ಯಾರನ್ನು ಆಯ್ಕೆ ಮಾಡಬೇಕೆಂಬುದು ಜನರಿಗೆ ಬಿಟ್ಟದ್ದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಬೂತ್ ಹಂತದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿಯ ಸೈದ್ಧಾಂತಿಕ ಸಂಘರ್ಷ ಎಂದು ಕರೆದಿದ್ದಾರೆ. ಕಾಂಗ್ರೆಸ್ ಅನ್ನು ಮಹಾತ್ಮ ಗಾಂಧಿಗೆ, ಬಿಜೆಪಿ ಹಾಗೂ ಆರ್ಎಸ್ಎಸ್ ಅನ್ನು ನಾಥುರಾಂ ಗೂಡ್ಸೆಗೆ ಹೋಲಿಕೆ ಮಾಡಿ ಅವರು ಮಾತನಾಡಿದರು.
ದೇಶದ ನಿರುದ್ಯೋಗ ಹಾಗೂ ಕೃಷಿ ಸಂಕಷ್ಟಕ್ಕೆ ಮೋದಿ ಸರ್ಕಾರ ಕಾರಣ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಇವುಗಳನ್ನು ನಿಭಾಯಿಸಲಿದೆ. ಕನಿಷ್ಠ ಆದಾಯ ಭರವಸೆಯನ್ನೂ ಈಡೇರಿಸಲಿದೆ. ಯಾರೊಬ್ಬರೂ ಕನಿಷ್ಠ ಆದಾಯ ಮಟ್ಟದಿಂದ ಕೆಳಗಿರದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿ ನಾವು ನೀಡಿದ್ದ ಭರವಸೆಯಂತೆ ಸಾಲಮನ್ನಾ ಮಾಡಿದ್ದೇವೆ ಎಂದು ಬೆನ್ನು ತಟ್ಟಿಕೊಂಡರು.