ನವದೆಹಲಿ: ಗಡಿ ನಿಯಂತ್ರಣಾ ರೇಖೆ (LoC)ಯಿಂದ ವಾಸ್ತವಿಕ ಗಡಿ ರೇಖೆಯ (LAC)ವರೆಗೂ ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡನಾಡಿದ ಪಿಎಂ ಮೋದಿ, ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ನೆರೆ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯನ್ನು ಉಲ್ಲೇಖಿಸಿದ ಮೋದಿ, ನಮ್ಮ ಯೋಧರು ಏನು ಮಾಡಬಹುದು, ನಮ್ಮ ದೇಶ ಏನು ಮಾಡಬಹುದು ಎಂಬುದಕ್ಕೆ ಇಡೀ ಜಗತ್ತಿಗೇ ಲಡಾಖ್ ಸಾಕ್ಷಿಯಾಗಿದೆ ಎಂದರು.
ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸುತ್ತಲೇ ಇದ್ದು, ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ನಮಗೆ ನಮ್ಮ ಸಾರ್ವಭೌಮತ್ವವೇ ಹೆಚ್ಚು. ಭಾರತವು ಒಗ್ಗೂಡಿ ತನ್ನ ಸಾರ್ವಭೌಮತ್ವವನ್ನು ರಕ್ಷಿಸುತ್ತದೆ. ಇದಕ್ಕೆ ಧಕ್ಕೆ ಉಂಟು ಮಾಡುವವರನ್ನು ನಮ್ಮ ಯೋಧರು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.