ಗುವಾಹಟಿ(ಅಸ್ಸಾಂ): ಒಂದು ತಿಂಗಳ ನಂತರ ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 34,000 ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಪ್ರವಾಹದಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಅಸ್ಸಾಂನ ಧೆಮಾಜಿ, ಲಖಿಂಪುರ್, ಬಿಸ್ವಾನಾಥ್ ಮತ್ತು ಚಿರಾಂಗ್ ಜಿಲ್ಲೆಗಳ 109 ಗ್ರಾಮಗಳ 34,000 ಜನರು ಬಾಧಿತರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, 4,200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆ ನಾಶವಾಗಿದೆ.
ಕಳೆದ ವರ್ಷವೂ ಆಗಸ್ಟ್ ಮೊದಲ ವಾರದವರೆಗೆ ಅಸ್ಸಾಂನಲ್ಲಿ 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಸುಮಾರು 113 ಜನರು ಸಾವನ್ನಪ್ಪಿದ್ದರು. ಇನ್ನು ಮೇ 22ರಂದು ಭೂ ಕುಸಿತದಲ್ಲಿ 26 ಮಂದಿ ಮೃತರಾಗಿದ್ದರು. ಈ ಬಾರಿಯ ಮಾನ್ಸೂನ್ ಮಳೆಯಿಂದ ಆಗಸ್ಟ್ ಮೊದಲ ವಾರದಲ್ಲಿ ರಾಜ್ಯದ 33 ಜಿಲ್ಲೆಗಳ 5,378 ಹಳ್ಳಿಗಳಲ್ಲಿ 57 ಲಕ್ಷ ಜನರು ಬಾಧಿತರಾಗಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್ ನೇತೃತ್ವದ ಆರು ಸದಸ್ಯರ ಕೇಂದ್ರ ತಂಡವು ಪ್ರವಾಹದಿಂದ ಉಂಟಾದ ಹಾನಿಯನ್ನು ವೀಕ್ಷಿಸಲು ಕಳೆದ ತಿಂಗಳು ಅಸ್ಸಾಂಗೆ ಭೇಟಿ ನೀಡಿತ್ತು.
ಈ ಪ್ರವಾಹದಲ್ಲಿ ಅನೇಕ ಕಾಡು ಪ್ರಾಣಿಗಳು, ಅಭಯಾರಣ್ಯಗಳು, ಉದ್ಯಾನವನಗಳು ನಾಶವಾಗಿದ್ದವು. ವಿಶ್ವಪ್ರಸಿದ್ಧ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಸೇರಿದಂತೆ ಅನೇಕ ಭಾಗದಲ್ಲಿ 18 ಖಡ್ಗಾಮೃಗಗಳು ಮತ್ತು 135 ಕಾಡು ಪ್ರಾಣಿಗಳು ಪ್ರವಾಹದಿಂದ ಸಾವನ್ನಪ್ಪಿವೆ.
ಇದನ್ನೂ ಓದಿ: ವರ್ಷಧಾರೆಗೆ ಕಾಜಿರಂಗ ನ್ಯಾಷನಲ್ ಪಾರ್ಕ್ ಜಲಾವೃತ: ವಿಡಿಯೋ