ನಿವಾಡಿ(ಮಧ್ಯಪ್ರದೇಶ):ಮಳೆ ಸುರಿಸದೇ ಮುನಿಸಿಕೊಂಡ ವರುಣನನ್ನು ಒಲಿಸಲು ಜನರು ಕಪ್ಪೆಗಳ ಮದುವೆ ಸೇರಿದಂತೆ ವಿಚಿತ್ರ ಆಚರಣೆಗಳನ್ನು ನಡೆಸುತ್ತಾರೆ. ಅದೇ ರೀತಿ ಮಧ್ಯಪ್ರದೇಶದ ನಿವಾಡಿ ಜಿಲ್ಲೆಯಲ್ಲಿ ಮಳೆಗಾಗಿ ಜನರು ಶ್ವಾನಗಳಿಗೆ ಮದುವೆ ಮಾಡಿಸಿದ್ದಾರೆ.
ಹೌದು ಹಲವು ತಿಂಗಳಿನಿಂದ ನಿವಾಡಿ ಭಾಗದಲ್ಲಿ ಮಳೆಯ ಸುಳಿವಿಲ್ಲ. ಹೀಗಾಗಿ ಜನ ಇಂದ್ರದೇವನನ್ನು ಬರಮಾಡಿಕೊಳ್ಳಲು ನಾಯಿಗಳಿಗೆ ಮದುವೆ ಮಾಡುವ ವಿಚಿತ್ರ ಆಚರಣೆಯೊಂದನ್ನೆ ಕೈಗೊಂಡಿದ್ದಾರೆ. ಜಿಲ್ಲೆಯ ಪೂಚಿಕಾರ್ಗುವಾ ಗ್ರಾಮದ ಗೋಲು ಮತ್ತು ಕುಟಿಯಾ ಎಂಬ ನಾಯಿಗಳಿಗೆ ಅದ್ಧೂರಿಯಾಗಿ ವಿವಾಹ ಮಹೋತ್ಸವ ಏರ್ಪಡಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಇವುಗಳಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮದುವೆ ಮನೆಯಲ್ಲಿ ವಾದ್ಯಗೋಷ್ಠಿ ನಡೆಸಿ, ಪಟಾಕಿ ಸಿಡಿಸಿ ಸಾವಿರಾರು ಜನರಿಗೆ ಊಟ ಹಾಕಿಸಿ ಗ್ರಾಂಡ್ ಆಗಿಯೇ ನಾಯಿಗಳ ಮದುವೆ ನೆರವೇರಿಸಿದ್ದಾರೆ. ಈ ವಿಚಿತ್ರ ಆಚರಣೆ ಬಗ್ಗೆ ವಿವರಿಸಿದ ಗ್ರಾಮಸ್ಥರೊಬ್ಬರು, ಹಳ್ಳಿಯಲ್ಲಿ ಮಳೆ ಬರದೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ ಮೂಕ ಪ್ರಾಣಿಗಳ ಮದುವೆ ಮಾಡಿಸಿದರೆ ವರುಣದೇವ ಒಲೆಯುತ್ತಾನೆ ಎಂಬ ನಂಬಿಕೆ ನಮ್ಮದು. ಹಾಗಾಗಿ ನಾಯಿಗಳಿಗೆ ಮದುವೆ ಮಾಡುತ್ತಿದ್ದೇವೆ, ಇದರಿಂದ ಇಂದ್ರದೇವ ಸಂತುಷ್ಟನಾಗಿ ಮಳೆ ಸುರಿಸುತ್ತಾನೆ. ನಮ್ಮ ನೀರಿನ ಸಮಸ್ಯೆ ನೀಗಿಸುತ್ತಾನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ರು.
ಇದನ್ನೂ ಓದಿ:ಚರಿತ್ರೆಯಲ್ಲೇ ಆತ ಕೆಟ್ಟ ಅಧ್ಯಕ್ಷನಾಗಿ ಉಳಿಯಲಿದ್ದಾರೆ: ಟ್ರಂಪ್ ಮೇಲೆ ಬುಲೆಟ್ನಂತೆ ವಾಗ್ದಾಳಿ ನಡೆಸಿದ ಅರ್ನಾಲ್ಡ್