ವಾರಣಾಸಿ (ಉತ್ತರ ಪ್ರದೇಶ): ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಐವರು ಪ್ರಾಧ್ಯಾಪಕರು ಬ್ಯಾಕ್ಟೀರಿಯೊಫೇಜ್ಗಳ (ಬ್ಯಾಕ್ಟೀರಿಯಾವನ್ನು ಕೊಲ್ಲುವ ಒಂದು ರೀತಿಯ ವೈರಸ್) ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ್ದಾರೆ. ಇದು ಗಂಗೆಯಿಂದ ನೀರಿನಲ್ಲಿದ್ದು, ಇದರಿಂದ ಕೊರೊನಾ ಸೋಂಕು ಗುಣವಾಗುವ ಸಾಧ್ಯತೆ ಬಗ್ಗೆ ಸಂಶೋಧನಾ ಪ್ರಬಂಧ ಬರೆದಿದ್ದಾರೆ.
ಪ್ರಖ್ಯಾತ ನದಿ ಎಂಜಿನಿಯರ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮಾಜಿ ಪ್ರಾಧ್ಯಾಪಕ ಪ್ರೊ. ಯುಕೆ ಚೌಧರಿ ಅವರು, ಕೇಂದ್ರ ಸರ್ಕಾರ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)ಗೆ ಈ ಬಗ್ಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಆದರೂ ಪತ್ರ ಬರೆದ ಬೆನ್ನಲ್ಲೇ, ಕ್ಲಿನಿಕಲ್ ಪ್ರಯೋಗ ನಡೆಸಲಾಗಿದೆ. ಈ ನದಿ ತಂತ್ರಜ್ಞಾನದ ನ್ಯಾಯಯುತ ಬಳಕೆಯು ಕೊರೊನಾ ವೈರಸ್ ಸೃಷ್ಟಿಸಿರುವ ಬಿಕ್ಕಟ್ಟು ಮತ್ತು ಗಂಗೆಯ ದುಃಸ್ಥಿತಿಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಈ ಪ್ರಬಂಧ ತಿಳಿಸಿದೆ.
ಗಂಗೆಯ ನೀರು ಬ್ಯಾಕ್ಟೀರಿಯೊಫೇಜ್ ವೈರಸ್ಅನ್ನು ಹೊಂದಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಈ ಆವಿಷ್ಕಾರವನ್ನು ಸುಮಾರು 100 ವರ್ಷಗಳ ಹಿಂದೆಯೇ ಮಾಡಲಾಗಿದೆ. ಫೇಜ್(ಬ್ಯಾಕ್ಟೀರಿಯೊಫೇಜ್ ಸಂಕ್ಷಿಪ್ತ ರೂಪ) ಥೆರಪಿ ಎಂಬ ಚಿಕಿತ್ಸೆಯೊಂದಿದೆ. ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಕಳೆದ ಮಾರ್ಚ್ ತಿಂಗಳಲ್ಲಿ 'ನೇಚರ್ ನ್ಯಾನೊಟೆಕ್ನಾಲಾಜಿ' ಎಂಬ ಜರ್ನಲ್ನಲ್ಲಿ ಒಂದು ಸಂಶೋಧನಾ ಪ್ರಬಂಧವನ್ನು ಪ್ರಕಟಿಸಲಾಯಿತು. ಇದರ ಪ್ರಕಾರ ಬ್ಯಾಕ್ಟೀರಿಯೊಫೇಜ್ ಕಣಗಳನ್ನು ರಚಿಸುವ ಮೂಲಕ ಶೀತಜ್ವರ, ನೆಗಡಿಗಳನ್ನು ಸೃಷ್ಟಿಸುವ ವೈರಸ್ನ ಚಟುವಟಿಕೆಗಳನ್ನು ನಿರ್ನಾಮ ಮಾಡಬಹುದು. ಕೊರೊನಾ ವೈರಸ್ ಇದೇ ರೀತಿಯ ವೈರಸ್ ಆಗಿರುವುದರಿಂದ ಈ ಸಂಶೋಧನೆ ಮಹತ್ವ ಪಡೆದಿದೆ ಎಂದು ಸರ್ ಸುಂದರ್‌ಲಾಲ್ ಆಸ್ಪತ್ರೆಯ ನರವಿಜ್ಞಾನಿ ಮತ್ತು ಮಾಜಿ ವೈದ್ಯಕೀಯ ಅಧಿಕಾರಿ ವಿಜಯ್ನಾಥ್ ಮಿಶ್ರಾ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಗಂಗಾ ನೀರಿನ ಬಗ್ಗೆ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ ಐದು ಪ್ರಾಧ್ಯಾಪಕರಲ್ಲಿ ಒಬ್ಬರಾದ ಮಿಶ್ರಾ, ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಗಂಗಾ ತೀರದ ಪ್ರದೇಶಗಳಲ್ಲಿ ಕೊರೊನಾ ವೈರಸ್ ಕಾಯಿಲೆಯಿಂದ ಚೇತರಿಸಿಕೊಳ್ಳುವವರ ಪ್ರಮಾಣ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣವು 49 ಪ್ರತಿಶತದಷ್ಟಿದೆ. ಇದೇ ವೇಳೆ ಗಂಗಾ ನದಿ ಪಾತ್ರದ ನಗರಗಳಲ್ಲಿ ಈ ಪ್ರಮಾಣ 59 ರಿಂದ 60 ಪ್ರತಿಶತದಷ್ಟಿದೆ. ಇದು ನೈಸರ್ಗಿಕ ಪ್ರಯೋಗ. ಇದು ಕೊರೊನಾ ವೈರಸ್ ನಿಯಂತ್ರಿಸುವ ಏನೋ ಒಂದು ಗಂಗೆಯ ನೀರಿನಲ್ಲಿ ಇದೆ ಎಂಬುದನ್ನು ತೋರಿಸುತ್ತದೆ ಎಂದು ಮಿಶ್ರಾ ಹೇಳುತ್ತಾರೆ.