ಅಮರಾವತಿ (ಆಂಧ್ರಪ್ರದೇಶ): ರೈತರಿಂದ ಕೃಷಿ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ದಕ್ಷಿಣ ಭಾರತದ ಮೊದಲ 'ಕಿಸಾನ್ ರೈಲ್' ಯೋಜನೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಇಂದು ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಿದರು.
322 ಟನ್‌ಗಳಷ್ಟು ತಾಜಾ ಹಣ್ಣುಗಳನ್ನು ಹೊತ್ತ ಕಿಸಾನ್ ರೈಲು ರಾಷ್ಟ್ರ ರಾಜಧಾನಿ ದೆಹಲಿಯ ಅಜಾದ್‌ಪುರ್ ಮಂಡಿಯತ್ತ ಪ್ರಯಾಣ ಬೆಳಸಿತು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಅನಂತಪುರಂ ಸಂಸದ ರಂಗಯ್ಯ, ದಕ್ಷಿಣ ಭಾರತದ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಗಜಾನನ್ ಮಲ್ಯ, ಅನಂತಪುರಂ ಡಿಸಿ ಜಿ.ಚಂದ್ರುಡು ಸೇರಿ ಹಲವರು ಉಪಸ್ಥಿತರಿದ್ದರು.
ರೈತರಿಗಾಗಿ ಹೊಸ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ವಿಶೇಷವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಅನ್ನದಾತರಿಗೆ ಇದು ಅನುಕೂಲವಾಗಿದೆ. ಉತ್ಪನ್ನಗಳನ್ನು ಅತಿ ಶೀಘ್ರ ಮಾರುಕಟ್ಟೆಗೆ ತಲುಪಿಸುವುದು ಇದರ ಉದ್ದೇಶವಾಗಿದೆ. ಹಲವು ಮಾರ್ಗಗಳಲ್ಲಿ ಇದು ರೈತರಿಗೆ ವರದಾನವಾಗಲಿದೆ ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಕಿಸಾನ್ ರೈಲು ಸೇವೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆಯಲು ಫಸಲನ್ನು ಒಮ್ಮೆಗೆ ಸಾಗಾಟ ಮಾಡಬಹುದು. ಸಾಗಾಟ ಸಮಯ, ಖರ್ಚು ಕಡಿಮೆಯಾಗಲಿದೆ ಎಂದು ಅನಂತಪುರಂ ಡಿಸಿ ಜಿ ಚಂದ್ರುಡು ತಿಳಿಸಿದ್ದಾರೆ.
ಟ್ರಕ್ ಹಾಗೂ ಇತರೆ ಮಾರ್ಗಗಳ ಮೂಲಕ ಫಸಲು ಸಾಗಾಟದಿಂದ ರೈತರಿಗೆ ವರ್ಷಕ್ಕೆ ಶೇ.25ರಷ್ಟು ಅಂದ್ರೆ 300 ಕೋಟಿ ನಷ್ಟವಾಗುತ್ತಿತ್ತು. ಹಾಗಾಗಿ, ಅತಿ ಕಡಿಮೆ ಬೆಲೆಗೆ ರೈತರ ಬೆಳೆ ಸಾಗಾಟಕ್ಕೆ ರೈಲು ಸೇವೆ ಲಾಭದಾಯಕವಾಗಿದೆ. ಸಿಹಿ ಆರೇಂಜ್, ಬಾಳೆಹಣ್ಣು, ಮಾವು, ಪಪ್ಪಾಯಿ, ದಾಳಿಂಬೆ ಮತ್ತು ಕಲ್ಲಂಗಡಿಗೆ ದೆಹಲಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಎಂದು ಹೇಳಿದ್ದಾರೆ.