ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಮಾರ್ಚ್ 30ರಂದು ಮೃತಪಟ್ಟಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ವಿಜಯವಾಡಕ್ಕೆ ಸೇರಿದ 55 ವರ್ಷದ ವೃದ್ಧನೊಬ್ಬ ಮಾರ್ಚ್ 30ರ ಬೆಳಗ್ಗೆ 11.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಗಂಟೆಯ ಅವಧಿಯಲ್ಲೇ ಮೃತಪಟ್ಟಿದ್ದಾನೆ. ಮೃತನಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆಯೂ ಇತ್ತು ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮೊದಲ ಕೊರೊನಾ ಸಾವು ದಾಖಲಾಗಿದೆ.
ಮೃತನ ಮಗ ಮಾರ್ಚ್ 17ರಂದು ಹಿಂದೆ ದೆಹಲಿಯಿಂದ ವಾಪಸ್ ಆಗಿದ್ದು, ಆತನಲ್ಲಿಯೂ ಕೊರೊನಾ ಸೋಂಕು ದೃಢಪಟ್ಟಿತ್ತು. ಮಗನಿಂದಲೇ ತಂದೆಗೆ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದೆ. ಸರ್ಕಾರಿ ಮೂಲಗಳ ಪ್ರಕಾರ ಇಲ್ಲಿಯವರೆಗೆ ಆಂಧ್ರದಲ್ಲಿ 161 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂಬುದು ಪತ್ತೆಯಾಗಿದೆ.