ನವದೆಹಲಿ: ಕಳೆದ ನವೆಂಬರ್ 29 ರಿಂದ ಕೇಂದ್ರ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೇಂದ್ರ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ 16ನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ರೈಲ್ವೆ ಹಳಿಗಳನ್ನು ನಿರ್ಬಂಧಿಸುವುದಾಗಿ ಗುರುವಾರ ಘೋಷಿಸಿದ್ದಾರೆ.
ಈ ಕುರಿತು ಸಭೆ ನಡೆಸಿದ ರೈತ ಸಂಘಗಳು, ದೇಶಾದ್ಯಂತ ರೈಲು ಹಳಿಗಳನ್ನು ನಿರ್ಬಂಧಿಸುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ನೂತನ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸುಮಾರು ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘದ ಮುಖಂಡರು ಸಿಂಘು ಗಡಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ್ರು. ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಮತ್ತು ದೆಹಲಿಗೆ ತೆರಳಲು ಇರುವ ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುವುದಾಗಿ ಮತ್ತೆ ಎಚ್ಚರಿಸಿದ್ದಾರೆ. ಇದೇ ವೇಳೆ ರೈಲ್ವೆ ಹಳಿಗಳನ್ನು ನಿರ್ಬಂಧಿಸುವುದು ಹರಿಯಾಣ ಮತ್ತು ಪಂಜಾಬ್‌ಗೆ ಸೀಮಿತವಾಗಿಲ್ಲ, ಇದು ದೇಶಾದ್ಯಂತ ನಡೆಯಲಿದೆ ಎಂದು ರೈತ ಮುಖಂಡ ಬೂಟಾ ಸಿಂಗ್ ಹೇಳಿದದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರತಿಭಟನೆ ಕೈ ಬಿಡುವಂತೆ ರೈತ ಸಂಘದ ಮುಖಂಡರನ್ನು ಒತ್ತಾಯಿಸಿದ್ದಾರೆ ಮತ್ತು ಸರ್ಕಾರವು ರೈತ ಮುಖಂಡರೊಂದಿಗೆ ಯಾವುದೇ ಸಮಯದಲ್ಲಿ ಚರ್ಚೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಆದರೆ ರೈತ ಸಂಘಗಳು ಸಚಿವರ ಈ ಪ್ರಸ್ತಾಪವನ್ನು ತಿರಸ್ಕರಿಸಿವೆ ಮತ್ತು ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವವರೆಗೆ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿವೆ.
ಈಗಾಗಲೇ ಸರ್ಕಾರದೊಂದಿಗೆ ಐದು ಸುತ್ತಿನ ಮಾತುಕತೆ ನಡೆಸಲಾಗಿದೆ. ಯಾವ ಮಾತುಕತೆಯೂ ಫಲಪ್ರದವಾಗಿಲ್ಲ. ಸರ್ಕಾರವು ಮತ್ತೊಂದು ಸುತ್ತಿನ ಮಾತುಕತೆಗೆ ಯಾವುದೇ ಆಹ್ವಾನವನ್ನು ನಮಗೆ ಕಳುಹಿಸಿಲ್ಲ. ಸರ್ಕಾರವು ನಮಗೆ ಸಭೆಯ ಪ್ರಸ್ತಾಪವನ್ನು ಕಳುಹಿಸಿದರೆ, ನಾವು ಆ ಕುರಿತು ಸಭೆ ನಡೆಸಿ ನಂತರ ತೀರ್ಮಾನಿಸುವುದಾಗಿ ರೈತ ಮುಖಂಡ ಶಿವಕುಮಾರ್ ಕಕ್ಕಾ ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯ, ತೀವ್ರ ಚಳಿ ಮತ್ತು ಕೋವಿಡ್ ರೋಗದಿಂದಾಗಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದೇವೆ. ಆದರೂ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ರೈತ ಮುಖಂಡರು ಘೋಷಿಸಿದ್ದಾರೆ.
ಈ ಮಧ್ಯೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ 40 ಒಕ್ಕೂಟಗಳಲ್ಲಿ ಒಂದಾದ ಚಂಡೀಗಢ ಮೂಲದ ರೈತ ಸಂಘಟನೆ ಎಐಸಿಸಿಸಿ, ಕೃಷಿ ಮುಖಂಡರೊಂದಿಗೆ ಸಂವಾದವನ್ನು ಮುಕ್ತವಾಗಿಡಲು ಸರ್ಕಾರದ ಪ್ರಸ್ತಾವನೆಯನ್ನು ಸ್ವಾಗತಿಸಿದೆ.
ಇದನ್ನೂ ಓದಿ:ರೈತರ ಪ್ರತಿಭಟನೆ: ಸಿಂಘು ಗಡಿಯಲ್ಲಿ ಕರ್ತವ್ಯನಿರತ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕೊರೊನಾ!