ಪೂರ್ಣಿಯಾ(ಬಿಹಾರ): ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ದಲಿತ ಮುಖಂಡ ಶಕ್ತಿ ಮಲಿಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖಂಡರಾದ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಮತ್ತು ಇತರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಣಿಗಂಜ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಲು ತೇಜಸ್ವಿ ಪ್ರಸಾದ್ ಯಾದವ್ 50 ಲಕ್ಷ ರೂ. ದೇಣಿಗೆ ಕೋರಿದ್ದಾರೆ ಮತ್ತು ಕ್ಷೇತ್ರದಲ್ಲಿ ತಮ್ಮ ಉತ್ತಮ ಕಾರ್ಯವನ್ನು ಮುಂದುವರೆಸಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಅಂತ ಶಕ್ತಿ ಮಲಿಕ್ ಆರೋಪಿಸಿದ್ದ ವಿಡಿಯೋ ಹತ್ಯೆಯ ನಂತರ ವೈರಲ್ ಆಗಿದೆ .
ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್, ಅನಿಲ್ ಕುಮಾರ್ ಸಾಧು ಮತ್ತು ಇತರರ ವಿರುದ್ಧ ಶಕ್ತಿ ಮಲಿಕ್ ಅವರ ಪತ್ನಿ ದೂರು ದಾಖಲಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮತ್ತು ಅವರ ಸಹೋದರ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೂರ್ಣಿಯಾ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಶರ್ಮಾ ತಿಳಿಸಿದ್ದಾರೆ.
ಮಲಿಕ್ ಪೂರ್ನಿಯಾದಲ್ಲಿನ ಮನೆಯಲ್ಲಿ ಮಲಗಿದ್ದ ವೇಳೆ ಬೈಕ್‌ಗಳಲ್ಲಿ ಬಂದ ಮೂವರು ವ್ಯಕ್ತಿಗಳು ಮನೆಗೆ ನುಗ್ಗಿ ತಲೆಗೆ ಗುಂಡು ಹಾರಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು.