ಅಹಮದಾಬಾದ್ (ಗುಜರಾತ್): ಇಲ್ಲಿನ ನವರಂಗ್ಪುರದ ಶ್ರೇಯ ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಎಂಟು ರೋಗಿಗಳ ಪೈಕಿ ತಂದೆ-ಮಗ ಕೂಡ ಇದ್ದರು.
ಧೋಲ್ಕಾ ಜಿಲ್ಲೆಯ ನಿವಾಸಿಗಳಾದ ನವನೀತ್ ಶಾ ಹಾಗೂ ಅವರ ಮಗ ನರೇಂದ್ರ ಎಂಬವರು ಕಳೆದ 10 ದಿನಗಳಿಂದ ಶ್ರೇಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈವರೆಗೆ ಚಿಕಿತ್ಸೆಗಾಗಿ ಇಬ್ಬರಿಂದ 11 ಲಕ್ಷ ರೂ. ಬಿಲ್ ಕಟ್ಟಲಾಗಿದೆ. ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಇಂದು ಮುಂಜಾನೆ 3.30 ರ ಸುಮಾರಿಗೆ ನಡೆದ ಘಟನೆಯಲ್ಲಿ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ರೋಗಿಗಳು ಸಾವನ್ನಪ್ಪಿದ್ದರು. ಈ ಸಂಬಂಧ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.