ನವದೆಹಲಿ : ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸಮರೋಪಾದಿಯಲ್ಲಿ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಈ ನಡುವೆ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶದ ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ.
ರೈತರಿಂದ ಸರ್ಕಾರ ಖರೀದಿಸುವ ಬೆಳೆಗಳಿಗೆ ಕೇವಲ ಮೂರೇ ದಿನದಲ್ಲಿ ಪರಿಹಾರ ನೀಡುವುದಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಕೈಲಾಶ್ ಚೌಧರಿ ತಿಳಿಸಿದ್ದಾರೆ. ಮಾತ್ರವಲ್ಲದೇ, ರೈತರ ಬೆಳೆ ಖರೀದಿಗೆ ರಾಜ್ಯ ಸರ್ಕಾರಗಳು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ರಾಷ್ಟ್ರಾದ್ಯಂತ ಲಾಕ್‌ಡೌನ್ ಮುಂದುವರೆದಿರುವುದರಿಂದ ಮಧ್ಯಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೋಧಿ ಖರೀದಿಗೆ ಪ್ರಕ್ರಿಯೆಗಳು ನಡೆಯುತ್ತಿವೆ. ಹರಿಯಾಣ ಸರ್ಕಾರ ಮೊದಲು ಸಾಸಿವೆ ಖರೀದಿ ಮಾಡುವುದಾಗಿ ಘೋಷಿಸಿದೆ. ಏಪ್ರಿಲ್ 20 ರಿಂದ ಗೋಧಿಯನ್ನು ಖರೀದಿ ಮಾಡಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅವರು, ಕೊರೊನಾ ವೈರಸ್ ಬಿಕ್ಕಟಿನ ವೇಳೆ ಕೇಂದ್ರ ಸರ್ಕಾರ ದೇಶದ ರೈತರ ಬೆಂಬಲಕ್ಕೆ ನಿಂತಿದ್ದು, ಅನ್ನದಾತರ ಹಿತಾಸಕ್ತಿಗಾಗಿ ಹಲವು ನಿರ್ಧಾರಗಳನ್ನು ಕೈಗೊಂಡಿದೆ ಎಂದು ವಿವರಿಸಿದ್ರು. ರೈತರ ಯಾವುದೇ ಕೃಷಿ ಚಟುವಟಿಕೆಗಳನ್ನು ನಿಲ್ಲಿಸುವುದಿಲ್ಲ. ಅವರು ತಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸಬಹುದು ಎಂದು ಪ್ರಧಾನಿ ಹೇಳಿದ್ದಾರೆ ಎಂದು ಸಚಿವ ಚೌಧರಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಪಂಚಾಯಿತಿ ಮಟ್ಟದಿಂದ ಹಾಗೂ ಏಜೆನ್ಸಿಗಳ ಮೂಲಕ ರೈತರ ಆಹಾರ ಪದಾರ್ಥಗಳ ಖರೀದಿಗೆ ರಾಜ್ಯ ಸರ್ಕಾರಗಳು ಅಗತ್ಯ ವ್ಯವಸ್ಥೆ ಮಾಡಬೇಕು. ಅದರ ಜೊತೆ ಜೊತೆಗೆ ಮಹಾಮಾರಿ ಕೋವಿಡ್-19 ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ತಾಕೀತು ಮಾಡಿದ್ದಾರೆ.