ಲಕ್ನೋ: ಉತ್ತರ ಪ್ರದೇಶದ ಜೌನ್‌ಪುರ ನಗರದ ಹಲವಾರು ಗ್ರಾಮಗಳ ಮೇಲೆ ರಕ್ಕಸ ಮಿಡತೆಗಳ ಹಿಂಡುಗಳು ದಾಳಿ ನಡೆಸಿವೆ ಎಂದು ಕೃಷಿ ಉಪನಿರ್ದೇಶಕ ಜಯಪ್ರಕಾಶ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಕೃಷಿ ಉಪನಿರ್ದೇಶಕ, ಈಗಾಗಲೇ ಮಿಡತೆಗಳು ಈ ಪ್ರದೇಶದ ಅನೇಕ ಹೊಲಗಳಲ್ಲಿನ ಬೆಳೆಗಳನ್ನು ಹಾನಿಗೊಳಿಸಿದ್ದು, ಇದರಿಂದಾಗಿ ರಾಜ್ಯಾದ್ಯಂತ ರೈತರಿಗೆ ತೊಂದರೆಯಾಗುವುದಲ್ಲದೇ, ಬಹುದೊಡ್ಡ ಆರ್ಥಿಕ ಸವಾಲು ಎದುರಾಗಲಿದೆ ಎಂದರು.
ಲಾಕ್‌ಡೌನ್ ಸಮಯದಲ್ಲಿ ರೈತರು ತರಕಾರಿ ಕೃಷಿಯಲ್ಲಿ ಭಾರಿ ನಷ್ಟವನ್ನು ಅನುಭವಿಸಿದ್ದರು. ಈ ನಷ್ಟವನ್ನು ಸರಿದೂಗಿಸಲು, ಮೆಕ್ಕೆಜೋಳ ಬೇಸಾಯ ಆಚರಣೆಗೆ ತಂದರು. ಆದರೆ ಇದೀಗ ಬೆಳೆಗಳ ಮೇಲೆ ಮಿಡತೆಗಳು ತಮ್ಮ ದಾಳಿಯನ್ನು ಮುಂದುವರೆಸಿರುವುದು ರೈತರಿಗೆ ದೊಡ್ಡ ಸವಾಲಾಗಿ ಕಂಡು ಬರುತ್ತಿದೆ. ಆದರೆ ಇವರ ಕಷ್ಟ ನೋಡಿರುವ ಸ್ಥಳೀಯ ಅಧಿಕಾರಿಗಳು ರೈತರಿಗೆ ನೆರವಾಗುತ್ತಿದ್ದಾರೆ ಎಂದು ವಿವರಿಸಿದರು.
ಮಾನ್ಸೂನ್ ಮಾರುತದಲ್ಲಿ ಏರುಪೇರಾದಾಗ ಮಿಡತೆಗಳ ದಾಳಿ ಸಂಭವ: ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ಜಾರ್ಖಂಡ್ ರಾಜ್ಯಗಳ ರೈತರ ಬೆಳೆ ಪಾಕಿಸ್ತಾನ ಮತ್ತು ಇರಾನ್ನಿಂದ ಬಂದು ದಾಳಿ ಮಾಡುತ್ತಿರುವ ಕೋಟ್ಯಾಂತರ ಮಿಡತೆಗಳ ಪಾಲಾಗುತ್ತಿದೆ. ಇವು ಮಾನ್ಸೂನ್ ಮಾರುತದ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಏರುಪೇರಾದಾಗಲೆಲ್ಲ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವುದು ವರದಿಯಾಗಿದೆ.