ಜೈಪುರ್ (ರಾಜಸ್ಥಾನ): ವಸತಿ ಯೋಜನೆಗಾಗಿ, ಜೈಪುರ ಅಭಿವೃದ್ಧಿ ಪ್ರಾಧಿಕಾರ (ಜೆಡಿಎ)ವು ಭೂಸ್ವಾಧೀನ ಮಾಡಿರುವುದನ್ನು ವಿರೋಧಿಸಿ ರೈತರು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ರಾಜಸ್ಥಾನದ ಜೈಪುರದ ನಿಂದಾರ್ ಗ್ರಾಮದಲ್ಲಿ ಐದು ಮಹಿಳೆಯರು ಸೇರಿದಂತೆ ಒಟ್ಟು ಇಪ್ಪತ್ತೊಂದು ರೈತರು ತಮ್ಮ ಕುತ್ತಿಗೆಯವರೆಗೆ ಮಣ್ಣಿನಲ್ಲಿ ಹೂತುಹಾಕಿಕೊಂಡು ಪ್ರತಿಭಟನೆ ಮಾಡಿದ್ದಾರೆ.
ತಿದ್ದುಪಡಿ ಮಾಡಿದ ಭೂಸ್ವಾಧೀನ ಕಾಯ್ದೆಯ ಪ್ರಕಾರ ತಮ್ಮ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು. ಜೊತೆಗೆ ಜಮೀನಿಗೆ ತಕ್ಕ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಹಿಂದೆ ಅಂದರೆ ಜನವರಿಯಲ್ಲಿಯೇ ರೈತರು 'ಜಮೀನು ಸಮಾಧಿ ಸತ್ಯಾಗ್ರಹ' ಕೈಗೊಂಡಿದ್ದರು. ಆದರೆ, 50 ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡಿದ್ದರು.
ಇದೀಗ ರೈತರು ತಮ್ಮ ಹಕ್ಕುಗಳನ್ನು ಪಡೆಯುವವರೆಗೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.