ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ಧ ಭಾರತೀಯ ಕಿಸಾನ್ ಯೂನಿಯನ್ (ಲಖೋವಾಲ್) ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಂಡಿದೆ.
ಲಖೋವಾಲ್ ಬಣವು ಇತರ ಒಕ್ಕೂಟಗಳೊಂದಿಗೆ ಸಮಾಲೋಚಿಸದೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದ್ದರಿಂದ ಅರ್ಜಿಯನ್ನು ಉನ್ನತ ನ್ಯಾಯಾಲಯದಿಂದ ಹಿಂಪಡೆಯಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಕೃಷಿ ಸಮುದಾಯದ ಹಿತದೃಷ್ಟಿಯಿಂದ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಬಿಕೆಯು (ಲಖೋವಾಲ್) ಅಧ್ಯಕ್ಷ ಅಜ್ಮೀರ್ ಸಿಂಗ್ ಲಖೋವಾಲ್ ಖಚಿತಪಡಿಸಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ಸುಮಾರು 400 ಪುಟಗಳ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ರಾಜಕೀಯ ಪಕ್ಷಗಳ ರ್ಯಾಲಿಗಳನ್ನು ವಿರೋಧಿಸಿದ ಲಖೋವಾಲ್, ಅವರ ‘ನಾಟಕ’ ರೈತರ ಹಿತದೃಷ್ಟಿಯಿಂದಲ್ಲ. ರಾಜಕೀಯ ಮೈಲೇಜ್ ಪಡೆಯುವುದು ಮತ್ತು ತಮ್ಮದೇ ಆದ ಪಟ್ಟಭದ್ರ ಹಿತಾಸಕ್ತಿಗಳನ್ನು ಉತ್ತೇಜಿಸುವುದು ಅವರ ಉದ್ದೇಶವಾಗಿದೆ ಎಂದಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಬಿಕೆಯು (ಲಖೋವಾಲ್) ಹಿಂಪಡೆದಿರುವುದು ಶಿರೋಮಣಿ ಅಕಾಲಿ ದಳದ ಒತ್ತಡದ ಪರಿಣಾಮವಾಗಿದೆ. ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟೀಕಿಸಿದ್ದಾರೆ.