ಉದಯಪುರ (ರಾಜಸ್ಥಾನ): ವಿದ್ಯುತ್ ಇಲಾಖೆಯ ಕಂಪ್ಯೂಟರ್‌ನ ಸರ್ವರ್‌ನಲ್ಲಿನ ದೋಷದಿಂದಾಗಿ ಉದಯಪುರದ ರೈತನೋರ್ವನಿಗೆ 3.71 ಕೋಟಿ ರೂ. ವಿದ್ಯುತ್ ಬಿಲ್ ಬಂದಿತ್ತು. ಬಳಿಕ ತಾಂತ್ರಿಕ ಸಮಸ್ಯೆ ಬಗೆಹರಿಸಿ ರೈತನಿಗೆ 6,400 ರೂ.ಗಳ ಬಿಲ್ (ನಿಜವಾದ ಬಿಲ್) ಪಾವತಿಸಲು ತಿಳಿಸಲಾಗಿದೆ.
ಉದಯಪುರದ ಗಿಂಗ್ಲಾ ಗ್ರಾಮದ ಪೆಮಾರಂ ಮನಾರಾಮ್ ದಂಗಿ (ರೈತ), ನನ್ನ ಅಂಗಡಿಯ ವಿದ್ಯುತ್ ಬಿಲ್ 3,71,61,507 ರೂ. ಬಂದಿದೆ. ಕೊರೊನಾ ಹಿನ್ನೆಲೆ ಲಾಕ್ಡೌನ್ ಆದ ಪರಿಣಾಮ ನಾನು ಅಂಗಡಿ ತೆರೆದಿರಲಿಲ್ಲ ಮತ್ತು ಹೆಚ್ಚು ವಿದ್ಯುತ್ ಬಳಸಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಗುಲಾಬ್ ಚಂದ್ ಕಟಾರಿಯಾ ಈ ಘಟನೆಗೆ ಸಂಬಂಧಿಸಿದಂತೆ, ಅನೇಕರು ಒಂದು ಲಕ್ಷ ರೂಪಾಯಿಗಳಷ್ಟು ವಿದ್ಯುತ್ ಬಿಲ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದರು.
ಗಿಂಗ್ಲಾ ಗ್ರಾಮದ ಪೆಮಾರಂ ಎಂಬ ರೈತನಿಗೆ 3,71,61,507 ರೂ. ವಿದ್ಯುತ್ ಬಿಲ್ ಬಂದಿದೆ. ರಾಜಸ್ಥಾನದಲ್ಲಿ ಸಾವಿರಾರು ಜನರು 1 ಲಕ್ಷ ರೂ.ಗಳ ವಿದ್ಯುತ್ ಬಿಲ್ ಪಡೆಯುತ್ತಿದ್ದಾರೆ. ಇದು ರಾಜ್ಯದಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತಿದೆ. ಹಾಗಾಗಿ ವಿದ್ಯುತ್ ಇಲಾಖೆ ಅಧಿಕಾರಿಗಳು ಅವರ ವ್ಯವಸ್ಥೆಯಲ್ಲಿ ಯಾವುದೇ ಅಸಮರ್ಪಕ ಕಾರ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಕಟಾರಿಯಾ ಹೇಳಿದರು.
ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಎನ್.ಎಲ್.ಸಾಲ್ವಿ ಮಾತನಾಡಿ, ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ. ಕಂಪ್ಯೂಟರ್‌ನ ಸರ್ವರ್‌ನಲ್ಲಿನ ದೋಷದಿಂದಾಗಿ ಈ ಸಮಸ್ಯೆ ಸೃಷ್ಟಿಯಾಯಿತು. ಇಂತಹ ಯಾವುದೇ ಸಮಸ್ಯೆಗಳಿದ್ದರೆ ಅದನ್ನು ನಮಗೆ ತಿಳಿಸಿದಲ್ಲಿ ನಾವು ಸರಿಪಡಿಸುತ್ತೇವೆಂದು ಎಲ್ಲಾ ವಿದ್ಯುತ್ ಬಳಕೆದಾರರಿಗೆ ಮನವಿ ಮಾಡಿದ್ದಾರೆ.