ನವದೆಹಲಿ: ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಸಪ್ತಪದಿ ತುಳಿಯಲು ಮುಂದಾಗಿದ್ದ ಮಗಳನ್ನ ಕುಟುಂಬದವರೇ ಸೇರಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಅಶೋಕ ನಗರದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ.
ಶೀತಲ್ ಎಂಬ ಯುವತಿ ತಮ್ಮ ಮನೆಯ ಪಕ್ಕದಲ್ಲಿದ್ದ ಅಂಕಿತ್ ಎಂಬ ಯುವಕನನ್ನ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಳು. ಕಳೆದ ಕೆಲ ದಿನಗಳ ಹಿಂದೆ ಯಾರಿಗೂ ಗೊತ್ತಾಗದಂತೆ ಆರ್ಯ ಸಮಾಜದ ಸಂಪ್ರದಾಯದಂತೆ ಈ ಜೋಡಿ ಮದುವೆ ಮಾಡಿಕೊಂಡಿತ್ತು. ಇದಾದ ಬಳಿಕ ಕೂಡ ಮನೆಯಲ್ಲಿ ಗೊತ್ತಾಗದಂತೆ ತಮ್ಮ ತಮ್ಮ ಮನೆಯಲ್ಲಿ ವಾಸವಾಗಿದ್ದರು. ಇದು ಹುಡುಗಿ ಮನೆಯವರಿಗೆ ಗೊತ್ತಾಗುತ್ತಿದ್ದಂತೆ 18ರ ಫೆಬ್ರವರಿ ರಾತ್ರಿ ಶೀತಲ್ ತಾಯಿ, ತಂದೆ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಸೇರಿ ಆಕೆಯ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಆಕೆಯ ಮೃತದೇಹವನ್ನ ಸುಮಾರು 80 ಕಿಲೋ ಮೀಟರ್ ದೂರದ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾರೆ.
ಇನ್ನು ಅಂಕಿತ ತನ್ನ ಪತ್ನಿಗೆ ಅನೇಕ ಸಲ ಪೋನ್ ಮಾಡಿದರೂ ಅದು ಸ್ವಿಚ್ ಆಫ್ ಬಂದಿದೆ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ ವೇಳೆ ನಿಜಾಂಶ ಹೊರಬಿದ್ದಿದೆ. ಇದೀಗ ಕುಟುಂಬದ ಎಲ್ಲ ಸದಸ್ಯರ ಬಂಧನ ಮಾಡಿರುವ ಪೊಲೀಸರು ಮೃತದೇಹ ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.