ದರ್ಭಂಗಾ (ಬಿಹಾರ): ಲಾಕ್ಡೌನ್ ಸಮಯದಲ್ಲಿ ತನ್ನ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ನೂರಾರು ಕಿಮೀ ಪಯಣಿಸಿ ಸ್ವಂತ ಊರು ತಲುಪಿ, ದೇಶದ ಗಮನ ಸೆಳೆದಿದ್ದ 'ಸೈಕಲ್ ಗರ್ಲ್' ಜ್ಯೋತಿ ಸತ್ತಿದ್ದಾಳೆ ಎಂಬ ಸಂದೇಶಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಜ್ಯೋತಿಯ ಫೋಟೊ ಹಾಕಿರುವ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಜ್ಯೋತಿ ಸಾವಿಗೆ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಿಜವಾಗಿಯೂ ಜ್ಯೋತಿ ಮೃತಪಟ್ಟಿದ್ದಾಳಾ ಅಥವಾ ಮೃತಪಟ್ಟಿದ್ದು ಮತ್ಯಾರೋ ಜ್ಯೋತಿಯಾ? ಈಟಿವಿ ಭಾರತ್ ಈ ವೈರಲ್ ಸಂದೇಶವನ್ನು ಫ್ಯಾಕ್ಟ್ ಚೆಕ್ ಮಾಡಿದ್ದು, ಸತ್ಯ ಮಾಹಿತಿ ಇಲ್ಲಿದೆ...
ದರ್ಭಂಗಾ ಬಳಿಯ ಜ್ಯೋತಿ ವಾಸಿಸುವ ಗ್ರಾಮಕ್ಕೆ ನಮ್ಮ ಈಟಿವಿ ವರದಿಗಾರ ವಿಜಯ ಕುಮಾರ ಶ್ರೀವಾಸ್ತವ ಖುದ್ದಾಗಿ ಭೇಟಿ ನೀಡಿದ್ದರು. ಈ ಸಮಯದಲ್ಲಿ ಸೈಕಲ್ ಗರ್ಲ್ ಜ್ಯೋತಿಯೊಂದಿಗೆ ಮಾತನಾಡಿದ್ದಾರೆ.
ಅದು ನಾನಲ್ಲ; ಜ್ಯೋತಿ
"ಯಾರೋ ಜ್ಯೋತಿ ಕುಮಾರಿ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಅದನ್ನೇ ಇಟ್ಟುಕೊಂಡು ನಾನು ಸತ್ತಿರುವುದಾಗಿ ಸಂದೇಶಗಳು ವೈರಲ್ ಆಗುತ್ತಿವೆ ಎಂದು ನನ್ನ ಚಿಕ್ಕಪ್ಪ ನನಗೆ ಹೇಳಿದರು. ನನ್ನನ್ನು ಯಾರೋ ಕೊಲೆ ಮಾಡಿದ್ದಾರೆ ಎಂಬ ವಿಷಯ ಸುಳ್ಳು. ಇಂಥ ಸುಳ್ಳು ಮಾಹಿತಿ ಮಾಹಿತಿ ಹರಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅದ್ಯಾರೋ ಜ್ಯೋತಿಯ ಬಗ್ಗೆ ಅವರು ಹೇಳುತ್ತಿರಬಹುದು. ಆದರೆ ಅದು ನಾನಲ್ಲ." ಎಂದು ಸೈಕಲ್ ಗರ್ಲ್ ಜ್ಯೋತಿ ಹೇಳಿದರು.
ಈಟಿವಿ ಭಾರತ್ಗೆ ಧನ್ಯವಾದ ಹೇಳಿದ ಜ್ಯೋತಿ ತಂದೆ!
ಈಟಿವಿ ಭಾರತ್ದೊಂದಿಗೆ ಮಾತನಾಡಿದ ಜ್ಯೋತಿಯ ತಂದೆ ಮೋಹನ್ ಪಾಸ್ವಾನ್, ಈ ಮಾಹಿತಿ ತಿಳಿದು ನನಗೆ ಕೆಲ ಹೊತ್ತು ಬೇಜಾರಾಗಿತ್ತು. ಆದರೆ ಸತ್ತ ಆ ಜ್ಯೋತಿಯ ಬಗ್ಗೆಯೂ ನಾವು ಯೋಚಿಸಬೇಕು. ಆ ಬಾಲಕಿಯ ತಂದೆ ತಾಯಿಗೆ ಎಷ್ಟು ನೋವಾಗುತ್ತಿರಬಹುದು ಎಂಬುದನ್ನು ತಿಳಿಯಬೇಕು. ಜಗತ್ತಿಗೆ ಸತ್ಯ ಸುದ್ದಿ ತಿಳಿಸಲು ಇಲ್ಲಿಯವರೆಗೆ ಆಗಮಿಸಿರುವ ಈಟಿವಿ ಭಾರತ್ಗೆ ನನ್ನ ಧನ್ಯವಾದಗಳು ಎಂದು ನುಡಿದರು.
ಜ್ಯೋತಿಯ ತಾಯಿ ಫೂಲೋ ದೇವಿ ಸಹ ಮಗಳ ಕುರಿತಾಗಿ ಸುಳ್ಳು ಸಂದೇಶ ಹರಡಿದ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಮೃತ ಜ್ಯೋತಿಯ ಬಗ್ಗೆ ಸಹಾನುಭೂತಿಯನ್ನೂ ವ್ಯಕ್ತಪಡಿಸಿದರು.
ಮೃತಪಟ್ಟ ಜ್ಯೋತಿ ಯಾರು? ಏನಿದು ಪ್ರಕರಣ?...
ಕಳೆದ ಜುಲೈ 1 ರಂದು ದರ್ಭಂಗಾ ಬಳಿಯ ಪತೋರ ಓಪಿ ಎಂಬ ಪ್ರದೇಶದಲ್ಲಿ ಜ್ಯೋತಿ ಎಂಬ ಬಾಲಕಿಯು ವಿದ್ಯುತ್ ತಗುಲಿ ಮೃತಪಟ್ಟಿದ್ದಳು. ಮಾವಿನ ತೋಪಿನಲ್ಲಿ ಮಾವು ತೆಗೆದುಕೊಳ್ಳಲು ಹೋದಾಗ ಈ ದುರ್ಘಟನೆ ಸಂಭವಿಸಿತ್ತು. ಮಾವಿನ ತೋಟದ ಮಾಲೀಕ ಓರ್ವ ನಿವೃತ್ತ ಮಿಲಿಟರಿ ಅಧಿಕಾರಿಯಾಗಿದ್ದು, ತೋಟದ ರಕ್ಷಣೆಗೆ ವಿದ್ಯುತ್ ತಂತಿಯ ಬೇಲಿಯನ್ನು ಅಳವಡಿಸಿದ್ದ. ಬಾಲಕಿಗೆ ಗೊತ್ತಾಗದೇ ಈ ತಂತಿಯನ್ನು ಮುಟ್ಟಿದ್ದರಿಂದ ಆಕೆ ಸಾವಿಗೀಡಾಗಿದ್ದಳು. ಈ ಸಾವಿನ ಪ್ರಕರಣದ ಪೋಸ್ಟ್ ಮಾರ್ಟಂ ವರದಿಯೂ ಬಂದಿದೆ.
ಬಾಲಕಿ ಸತ್ತ ನಂತರ ಆಕೆಯ ಶವ ತೋಟದ ಬಳಿ ಪತ್ತೆಯಾಗಿತ್ತು. ಇಲ್ಲಿಂದ ಮುಂದೆ ಬಾಲಕಿಯ ಸಾವಿನ ಕುರಿತಾಗಿ ವದಂತಿಗಳು ಹರಡಲಾರಂಭಿಸಿದವು. ಬಾಲಕಿಯ ಮೇಲೆ ದೌರ್ಜನ್ಯ ನಡೆಸಿ ನಂತರ ಕೊಂದು ಹಾಕಲಾಗಿದೆ ಎಂಬೆಲ್ಲ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿದವು. ಈ ಜ್ಯೋತಿಯ ಬದಲಾಗಿ ಸೈಕಲ್ ಗರ್ಲ್ ಜ್ಯೋತಿಯ ಚಿತ್ರವನ್ನು ಜೋಡಿಸಿ ಕೆಲ ಅವಿವೇಕಿ ನೆಟ್ಟಿಗರು ಪ್ರಮಾದ ಎಸಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಮಗ್ರ ತನಿಖೆ ನಡೆಸುತ್ತಿದ್ದಾರೆ.