ನವದೆಹಲಿ: ಭಾರತ- ಚೀನಾ ಗಡಿಯಲ್ಲಿ ಡ್ರಾಗನ್ ಅಬ್ಬರ, ಉಪಟಳ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇದೇ ಕಾರಣಕ್ಕೆ ಭಾರತೀಯ ಸೇನೆ ಎಲ್ಲವನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ.
ಚೀನಾ- ಭಾರತ ಗಡಿಯ ತೀರಾ ಹತ್ತಿರದಲ್ಲಿ ಅಮೆರಿಕದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಅಳವಡಿಸಲು ಮೆಗಾ ಪ್ಲಾನ್ ರೂಪಸಿದೆ. ಎಂ 777 ಅಲ್ಟ್ರಾ ಲೈಟ್ ಹೋವಿಟ್ಜ್ ಮತ್ತು ಚಿನೂಕ್ ಹ್ಯಾವಿ ಲಿಫ್ಟ್ ಹೆಲಿಕಾಪ್ಟರ್ಗಳನ್ನ ನಿಯೋಜಿಸಲು ಚಿಂತಿಸಿದೆ.
ಅರುಣಾಚಲ ಪ್ರದೇಶದ 17 ಮೌಂಟೇಣ್ ಸ್ಟ್ರೈಕ್ ಕಾರ್ಪ್ಸ್ ಮೂಲಕ ಇವುಗಳ ಯುದ್ಧ ಸಾಮರ್ಥ್ಯವನ್ನ ಪರೀಕ್ಷಿಸುವುದು ಸೇನೆಯ ಉದ್ದೇಶವಾಗಿದೆ. ಈ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾರತೀಯ ವಾಯು ಸೇನೆ ಸಹ ಪಾಲ್ಗೊಳ್ಳಲಿದ್ದು, ತರಬೇತಿಗೆ ಬೇಕಾದ ಎಲ್ಲ ನೆರವು ನೀಡಲಿದೆ. ಈ ಮೂಲಕ ನಿಜವಾದ ಯುದ್ಧ ಸನ್ನಿವೇಶದಲ್ಲಿ ಕಾರ್ಯಾಚರಣೆ ಯಾವ ರೀತಿ ಇರುತ್ತೋ ಹಾಗೆ ಈ ಪರೀಕ್ಷೆ ವೇಳೆ ಕಸರತ್ತು ನಡೆಯಲಿದೆ.
ಈ ಪರೀಕ್ಷಾರ್ಥ ಕಾರ್ಯಾಚರಣೆಗೆ ಸೇನೆ ಹಿಮ್ ವಿಜಯ್ ಎಂದು ನಾಮಕರಣ ಮಾಡಿದೆ. 17ನೇ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ಗೆ ಎಂ777 ಅಲ್ಟ್ರಾ ಲೈಟ್ ಹೋವಿಟ್ಜ್ಗಳನ್ನ ಶತೃಗಳ ವಿರುದ್ಧ ಬಳಕೆ ಮಾಡಲು ಸನ್ನದ್ಧ ಸ್ಥಿತಿಯಲ್ಲಿ ನೀಡಲಾಗಿವುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆ ವೇಳೆ ಚಿನೂಕ್ ಹೆಲಿಕಾಪ್ಟರ್ಗಳು ಚಂಡೀಗಢ ವಾಯುನೆಲೆಯಿಂದ ಸನ್ನದ್ಧ ಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಲಿವೆ. ಸುಮಾರು 5 ಸಾವಿರ ಯೋಧರು ಈ ಕಾರ್ಯಾಚರಣೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ.