ಮುಂಬೈ: ಖಡಕ್ ಪೊಲೀಸ್ ಅಧಿಕಾರಿಯೆಂದೇ ಕರ್ನಾಟಕದಾದ್ಯಂತ ಜನಪ್ರಿಯರಾಗಿದ್ದ ಡಿಸಿಪಿ ತಮಿಳುನಾಡು ಮೂಲದ ಕೆ. ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಮಾಸುವ ಮುನ್ನವೆ, ಮಹಾರಾಷ್ಟ್ರದ ಖಡಕ್ ಅಧಿಕಾರಿಯೊಬ್ಬರು ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ.
ಟೈಮ್ಸ್ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ "ಎನ್‌ಕೌಂಟರ್ ಸ್ಪೆಷಲಿಸ್ಟ್" ಎಂದೇ ಖ್ಯಾತಿ ಪಡೆದಿರುವ ಪ್ರದೀಪ್ ಶರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. 35 ವರ್ಷಗಳ ಪೊಲೀಸ್ ವೃತ್ತಿಯಲ್ಲಿ 150ಕ್ಕೂ ಅಧಿಕ ಅಪರಾಧಿಗಳನ್ನು ಇವರು ಸದೆಬಡಿದಿದ್ದಾರೆ.
ಪ್ರಸ್ತುತ, ಥಾಣೆಯ ಸುಲಿಗೆ ವಿರೋಧಿ ವಿಭಾಗದ (ಎಇಸಿ) ಮುಖ್ಯಸ್ಥ ಶರ್ಮಾ ಅವರು ತಮ್ಮ ರಾಜೀನಾಮೆ ಪತ್ರವನ್ನು 15 ದಿನಗಳ ಹಿಂದೆಯೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಬಹಳ ಹಿಂದಿನಿಂದಲೂ ರಾಜಕೀಯ ಸೇರುವ ಮಹತ್ವಾಕಾಂಕ್ಷೆ ಹೊಂದಿದ್ದ ಶರ್ಮಾ ಅವರು ಬಿಜೆಪಿ ಸೇರ್ಪಡೆಗೊಂಡು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಾಯುವ್ಯ ಮುಂಬೈನ ಅಂಧೇರಿ ಅಥವಾ ಪಾಲ್ಘರ್ ಜಿಲ್ಲೆಯ ನಲಸೋಪರಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.