ಸೋನ್ ಪ್ರಯಾಗ್: ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಕೇದಾರನಾಥ ಯಾತ್ರೆಗೆ ಬಂದಿದ್ದ ಕರ್ನಾಟಕ ಮೂಲದ ದಂಪತಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತಿ ಸಾವನ್ನಪ್ಪಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಸೋನ್ ಪ್ರಯಾಗ್ ಎಂಬಲ್ಲಿ ಭದ್ರಾವತಿ ಮೂಲದವರು ಎನ್ನಲಾದ ರಾಮು (70) ಹಾಗೂ ಭಾಗ್ಯ ರಶ್ಮಿ ಎಂಬ ದಂಪತಿ ಹೋಟೆಲ್ವೊಂದರಲ್ಲಿ ರೂಂ ಮಾಡಿದ್ದರು. ಸುಮಾರು ಹೊತ್ತು ಕಳೆದರೂ ರೂಂನಿಂದ ದಂಪತಿ ಹೊರ ಬರದ ಕಾರಣ ಹೋಟೆಲ್ ಸಿಬ್ಬಂದಿ ಕದ ತಟ್ಟಿದ್ದಾರೆ. ಆದರೆ ಆ ಕಡೆಯಿಂದ ಯಾವುದೇ ಉತ್ತರ ಬರದ ಕಾರಣ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಹೋಟೆಲ್ಗೆ ಬಂದ ಪೊಲೀಸರು ಬಾಗಿಲು ಒಡೆದು ಒಳ ಹೋಗಿ ನೋಡಿದರೆ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಪತಿ ರಾಮು ಅದಾಗಲೇ ಸಾವನ್ನಪ್ಪಿದ್ದು, ಅಸ್ವಸ್ಥರಾಗಿದ್ದ ಭಾಗ್ಯ ರಶ್ಮಿ ಅವರನ್ನು ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮಕ್ಕಳಿಲ್ಲದ ಕಾರಣ ಖಿನ್ನತೆಗೊಳಗಾಗಿದ್ದರಿಂದ ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಭಾಗ್ಯ ರಶ್ಮಿ ಹೇಳಿದ್ದಾರಂತೆ. ಪತಿ ಹೊರಗಡೆ ಹೋಗಿ ಅಂಗಡಿಯೊಂದರಿಂದ ಫಿನಾಯಿಲ್ ತಂದಿದ್ದರಂತೆ. ಬಳಿಕ ಇಬ್ಬರೂ ಅದನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದರಂತೆ. ಆದರೆ ಭಾಗ್ಯ ರಶ್ಮಿ ಅವರು ಬದುಕುಳಿದಿದ್ದು, ಪತಿ ರಾಮು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಸೋನ್ ಪ್ರಯಾಗ್ನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.