ನವದೆಹಲಿ: ಬಿಟ್‌ಕಾಯಿನ್ ಒಳಗೊಂಡು ಎಲ್ಲಾ ರೀತಿಯ ಕ್ರಿಪ್ಟೋ ಕರೆನ್ಸಿಗಳ ವಹಿವಾಟನ್ನು ಕಾನೂನು ಮಾನ್ಯತೆಯಿಂದ ದೂರವಿಟ್ಟ ಕೇಂದ್ರ ಹಣಕಾಸು ಸಚಿವಾಲಯವು ಬಿಟ್‌ಕಾಯಿನ್ ಬಳಕೆಯ ನಿಯಂತ್ರಣಕ್ಕೆ ನೂತನ ಮಸೂದೆ ಜಾರಿಗೆ ತರಲಿದೆ.
ಬಿಟ್ಕಾಯಿನ್ನ ಕ್ರಿಪ್ಟೊಕರೆನ್ಸಿ ವಹಿವಾಟು ನಡೆಸುವ, ಮಾರುವ ಅಥವಾ ಸಂಗ್ರಹಿಸಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಕಾಯ್ದೆ ಶೀಘ್ರದಲ್ಲಿ ಜಾರಿಗೆ ಬರಲಿದೆ.
ಕ್ರಿಪ್ಟೊಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ- 2019 ಕರುಡು ಸಿದ್ಧಪಡಿಸಿ ಬಿಟ್‌ಕಾಯಿನ್ ತಯಾರಿಸುವ, ಸಂಸ್ಕರಿಸುವ, ಹೊಂದುವ, ಮಾರಾಟ, ವರ್ಗಾವಣೆ, ವಿಲೇವಾರಿ, ಹಂಚಿಕೆ ಅಥವಾ ಗುಪ್ತವಾಗಿ ವ್ಯವಹರಿಸುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುವುದು ಎಂಬುದು ಈ ಕಾಯ್ದೆಯ ಪ್ರಸ್ತಾವನೆಯಲ್ಲಿದೆ.
ಕ್ರಿಪ್ಟೊಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ-2019 ಕಾಯ್ದೆ ಅನ್ವಯ, ಕೃತ್ಯದಲ್ಲಿ ಭಾಗಿಯಾದವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಕಾಯ್ದೆಯಡಿ ಕ್ರಿಪ್ಟೊಕರೆನ್ಸಿ ವಹಿವಾಟು ಸಂಪೂರ್ಣವಾಗಿ ಕಾನೂನು ಬಾಹಿರಗೊಳಿಸಿ ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಏನಿದು ಕ್ರಿಪ್ಟೊ ಕರೆನ್ಸಿ?
ಕ್ರಿಪ್ಟೊ ಕರೆನ್ಸಿ ಎಂದರೆ, ಹಣಕಾಸು ವರ್ಗಾವಣೆಗೆ ಬಳಸುವ ಡಿಜಿಟಲ್ ಸಾಧನ. ಸಾಮಾನ್ಯವಾಗಿ ಬಳಕೆಯಲ್ಲಿರುವ ಕರೆನ್ಸಿಗಳ ವ್ಯವಸ್ಥೆಯನ್ನು ಆಯಾ ದೇಶಗಳ ಕೇಂದ್ರ ಬ್ಯಾಂಕ್‌ಗಳು (ಭಾರತದಲ್ಲಿ ಆರ್‌ಬಿಐ) ನಿರ್ವಹಿಸುತ್ತವೆ. ಆದರೆ ಕ್ರಿಪ್ಟೊ ಕರೆನ್ಸಿಗೆ ಇಂಥ ಸೆಂಟ್ರಲ್ ಬ್ಯಾಂಕ್ ಇಲ್ಲ. ಅದರ ನಿಯಂತ್ರಣ ವಿಕೇಂದ್ರೀಕೃತವಾಗಿದೆ. ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನದ ಮೂಲಕ ಕ್ರಿಪ್ಟೊ ಕರೆನ್ಸಿಗಳ ಉತ್ಪಾದನೆ ಮತ್ತು ಚಲಾವಣೆ ನಡೆಯುತ್ತದೆ. ಬಿಟ್‌ಕಾಯಿನ್ ಎಂಬುದು 2009ರಲ್ಲಿ ಬಿಡುಗಡೆಯಾದ ಕ್ರಿಪ್ಟೊ ಕರೆನ್ಸಿ. ನಂತರ ಹಲವಾರು ಕ್ರಿಪ್ಟೊ ಕರೆನ್ಸಿಗಳು ಅಸ್ತಿತ್ವಕ್ಕೆ ಬಂದಿವೆ.