ನವದೆಹಲಿ: 20,050 ಕೋಟಿ ರೂ. ಮೊತ್ತದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಕೊರೊನಾ ವೈರಸ್ಅನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ದೇಶದ ಜನರಿಗೆ ಕಿವಿಮಾತು ಹೇಳಿದ್ದಾರೆ.
ಬಿಹಾರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವೈರಸ್ ವಿರುದ್ಧ ಹೋರಾಟ ಅಗತ್ಯವಾಗಿದ್ದು, ಇದನ್ನ ಹಗುರವಾಗಿ ತೆಗೆದುಕೊಳ್ಳಬೇಡಿ. ಫೇಸ್ ಮಾಸ್ಕ್ ಹಾಕಿಕೊಳ್ಳುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಹೇಳಿದ್ದಾರೆ.
ನಾನು ನಿಮ್ಮಿಂದ ಕೆಲ ನಿರೀಕ್ಷೆಗಳನ್ನು ಹೊಂದಿದ್ದೇನೆ. ಮುಖಗವಸು ಕಡ್ಡಾಯ ಧರಿಸುವಿಕೆ ಮತ್ತು ಸಾಮಾಜಿಕ ಅಂತ ನಿಯಮ ಪಾಲನೆ ಮಾಡಿ. ಸುರಕ್ಷಿತವಾಗಿರಿ. ಮತ್ತು ಆರೋಗ್ಯವಾಗಿರಿ. ಕುಟುಂಬದಲ್ಲಿನ ಹಿರಿಯ ನಾಗರಿಕರ ಬಗ್ಗೆ ಎಚ್ಚರವಹಿಸಿ. ಮಹಾಮಾರಿ ವಿರುದ್ಧ ಹೋರಾಟ ನಡೆಸುವ ಲಸಿಕೆ ಅಭಿವೃದ್ಧಿಪಡಿಸುವವರೆಗೆ ಇದಕ್ಕೆ ಸಾಮಾಜಿಕ ಅಂತರ ಒಂದೇ ಪರಿಹಾರವಾಗಿದೆ ಎಂದರು. ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಬೇಡ ಎಂದು ಮನವಿ ಮಾಡಿದರು.
ದೇಶದ 21 ರಾಜ್ಯಗಳಲ್ಲಿ ಪ್ರಧಾನಿ ಮತ್ಸ್ಯ ಸಂಪದ ಯೋಜನೆ ಆರಂಭ
ಈ ಯೋಜನೆಗಾಗಿ ಮುಂದಿನ 4-5 ವರ್ಷಗಳಲ್ಲಿ 20 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಆರಂಭದ ಕಾಮಗಾರಿಗೋಸ್ಕರ ರೂ. 1700 ಕೋಟಿ ರೂ ಮೀಸಲಿಡಲಾಗಿದೆ ಎಂದರು. ಇದೇ ವೇಳೆ ಕೃಷಿಕರ ಮಾಹಿತಿಗಾಗಿ ಇ–ಗೋಪಾಲ ಆ್ಯಪ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.