ಹೈದರಾಬಾದ್ : ಎರಡು ವರ್ಷಗಳಲ್ಲಿ 53 ಸಾವಿರ ಎಕರೆ ಪ್ರದೇಶದಲ್ಲಿ 50 ಸಾವಿರ ಗಿಡಗಳನ್ನು ನೆಡಲಾಗಿದೆ ಎಂದು ಮಾರ್ಗದರ್ಶಿ ಚಿಟ್ಫಂಡ್ಸ್ ಎಂಡಿ ಶೈಲಜಾ ಕಿರಣ್ ಹೇಳಿದ್ದಾರೆ.
ತೆಲಂಗಾಣದ ಹರಿತ ಹಾರಂನ ಭಾಗವಾಗಿ ಸಾಮಾಜಿಕ ಜವಾಬ್ದಾರಿಯಡಿ ಈ ಕಾರ್ಯವನ್ನು ಮಾಡಲಾಗಿದ್ದು, ಇಂದು ಈ ಪ್ರದೇಶದ ಗಿಡಗಳನ್ನು ಇಬ್ರಾಹಿಂಪಟ್ಟಣಂ ವಲಯದ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಅರಣ್ಯ ವಲಯಾಧಿಕಾರಿ ವಿಷ್ಣುವರ್ಧನ್ ರಾವ್ ಸೇರಿ ಹಲವರೊಂದಿಗೆ ಗುರ್ರಂಗುಡ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಶೈಲಜಾ ಕಿರಣ್, ಗಿಡಗಳನ್ನು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, 2019 ರಲ್ಲಿ ಅರಳಿ, ಹುಣಸೆ, ನೆಮಾಲಿ, ಬಾದಾಮಿ, ಪೇರಲ ಸೇರಿ ಮುಂತಾದ ಗಿಡಗಳನ್ನು ನೆಟ್ಟಿದ್ದೆವು. ಎಲ್ಲಾ ಗಿಡಗಳು ಇಂದು ಸೊಗಸಾಗಿ ಬೆಳೆದಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ಅರಣ್ಯಾಧಿಕಾರಿಗಳ ಸಹಾಯದಿಂದ ಇನ್ನೂ 50 ಸಾವಿರ ಸಸಿಗಳನ್ನು ನೆಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.