ನವದೆಹಲಿ: ಶಾಲಾ ಶಿಕ್ಷಕಿ ಮೇಲೆ ಅದೇ ಶಾಲೆಯ ಪ್ರಿನ್ಸಿಪಾಲ್ ಅತ್ಯಾಚಾರ ಮಾಡಿ ಅದರ ವಿಡಿಯೋ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಆಗ್ನೇಯ ದೆಹಲಿಯ ಜಸೋಲಾ ಪ್ರದೇಶದಲ್ಲಿನ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕಿ ದೂರಿನಲ್ಲಿ ತಿಳಿಸಿರುವ ಪ್ರಕಾರ, 2017ರಲ್ಲೇ ತನಗೆ ಪ್ರಿನ್ಸಿಪಾಲ್ ಲೈಂಗಿಕ ಕಿರುಕುಳ ನೀಡಿದ್ದ. ಇದೀಗ ಶಾಲೆ ಮುಕ್ತಾಯಗೊಂಡ ಬಳಿಕ ಹೆಚ್ಚುವರಿ ಕ್ಲಾಸ್ ತೆಗೆದುಕೊಳ್ಳುವಂತೆ ಅವರು ತಿಳಿಸಿದ್ದರು. ಅದರಂತೆ ನಾನು ಪ್ರತಿದಿನ ಮಕ್ಕಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದೆ.
ಇದೀಗ ನಾನು ಕ್ಲಾಸ್ ತೆಗೆದುಕೊಂಡ ಮೇಲೆ ತಮ್ಮ ಆಫೀಸ್ ರೂಮ್ಗೆ ಕರೆದುಕೊಂಡು ಹೋಗಿ ಸಾಫ್ಟ್ ಡ್ರಿಂಕ್ಸ್ನಲ್ಲಿ ಮತ್ತು ಬರುವ ಔಷಧಿ ಹಾಕಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದು, ಇದೇ ವೇಳೆ ವಿಡಿಯೋ ಸಹ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ. ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಶಿಕ್ಷಕಿ ಹೇಳಿಕೊಂಡಿದ್ದಾಳೆ.
ಇನ್ನು ಪ್ರಕರಣ ದಾಖಲು ಮಾಡಿಕೊಂಡಿರುವ ಸರಿತಾ ವಿಹಾರ್ ಪೊಲೀಸರು, ಈಗಾಗಲೇ ಪಿನ್ಸಿಪಾಲ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.