ನವದೆಹಲಿ: ದೆಹಲಿಯಲ್ಲಿನ ಅಭಿವೃದ್ಧಿ ಕಾರ್ಯಗಳ ವೇಗವು ಕೇಂದ್ರ ಸರ್ಕಾರದ ಕಾರ್ಯಗಳ ವೇಗಕ್ಕೆ ಸಮನಾಗಿರಬೇಕು. ದೆಹಲಿಗೆ ಕೇಂದ್ರದ ಜೊತೆ ವೇಗವಾಗಿ ನಡೆಯುವ ಸರ್ಕಾರದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯ ದ್ವಾರಕಾ ನಗರದ ಡಿಡಿಎ ಮೈದಾನದಲ್ಲಿ ಬಿಜೆಪಿ ವತಿಯಿಂದ ನಡೆದ ಚುನಾವಣಾ ರ‌್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕಳೆದ ಆರು ವರ್ಷಗಳಲ್ಲಿ ತಮ್ಮ ಸರ್ಕಾರ ಪ್ರಾರಂಭಿಸಿದ ಆಯುಶ್ಮಾನ್ ಭಾರತ್, ಜನ್ ಧನ್ ಯೋಜನೆ ಸೇರದಂತೆ ವಿವಿಧ ಕಾರ್ಯಕ್ರಮಗಳ ಫಲಾನುಭವಿಗಳ ತುಲನಾತ್ಮಕ ವಿಶ್ಲೇಷಣೆಯನ್ನು ಮಂಡಿಸಿದರು.
ಸ್ವಚ್ಛ ಭಾರತ ಮಿಷನ್ನಡಿ ಭಾರತದಲ್ಲಿ ನಿರ್ಮಿಸಿರುವ ಶೌಚಾಲಯಗಳ ಸಂಖ್ಯೆ ಈಜಿಪ್ಟ್ನ ಜನಸಂಖ್ಯೆಗಿಂತಲೂ ಹಾಗೂ ಪಿಎಂ ಆವಾಸ್ ಯೋಜನೆಯಡಿ ನಿರ್ಮಿಸಿರುವ ಮನೆಗಳ ಸಂಖ್ಯೆ ಶ್ರೀಲಂಕಾದ ಜನಸಂಖ್ಯೆಗಿಂತಲೂ ಹೆಚ್ಚಿದೆ. ಆಯುಶ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಅಮೆರಿಕಾ, ಮೆಕ್ಸಿಕೊ, ಕೆನಡಾದ ಜನಸಂಖ್ಯೆಗಿಂತಲೂ, ಜನ್‌ಧನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಅಮೆರಿಕಾ ಜನಸಂಖ್ಯೆಗಿಂತಲೂ ಹೆಚ್ಚಿದೆ. ಇನ್ನು ಉಜ್ವಲ ಹಾಗೂ ಸೌಭಾಗ್ಯ ಯೋಜನೆಯಡಿ ಉಚಿತ ಅನಿಲ ಹಾಗೂ ವಿದ್ಯುತ್ ಸಂಪರ್ಕ ಪಡೆದವರ ಸಂಖ್ಯೆ ಜರ್ಮನಿ-ಆಸ್ಟ್ರೇಲಿಯಾಗಿಂತಲೂ ಹೆಚ್ಚಿದೆ ಎಂದು ಮೋದಿ ತಮ್ಮ ಯೋಜನೆಗಳ ಫಲಾನುಭವಿಗಳ ಸಂಖ್ಯೆಯನ್ನ ಪ್ರಪಂಚದ ಇತರ ರಾಷ್ಟ್ರಗಳ ಜನಸಂಖ್ಯೆಗೆ ಹೋಲಿಕೆ ಮಾಡಿದರು.
ಹೀಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ದೇಶದಲ್ಲಿ ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದೆ. ಸ್ವಾತಂತ್ರ್ಯದ ಬಳಿಕ ಈ ವೇಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿರಲಿಲ್ಲ. ಹೀಗಾಗಿ ನಮ್ಮ ವೇಗಕ್ಕೆ ಸರಿಯಾಗಿ ನಡೆಯುವ ಸರ್ಕಾರ ದೆಹಲಿಗೆ ಬೇಕು ಎಂದು ಹೇಳಿದರು.
ಫೆ.8 ಕ್ಕೆ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ದೆಹಲಿಯಲ್ಲಿ ಮೋದಿಯ ಎರಡನೇ ಚುನಾವಣಾ ರ‌್ಯಾಲಿ ಇದಾಗಿದೆ.