ನವದೆಹಲಿ: ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ಗೆ ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ದೇಶದ ಪ್ರಮುಖ ರಾಜಕಾರಣಿಗಳ ಆರೋಗ್ಯದ ಮೇಲೆ ಅನುಮಾನಗಳು ವ್ಯಕ್ತವಾಗುತ್ತಿವೆ.
ಕೊರೊನಾ ಸೋಂಕು ದೃಢಪಟ್ಟ ಮೇಲೆ ಸತ್ಯೇಂದರ್ ಜೈನ್ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸ್ವಲ್ಪ ಮಟ್ಟಿನ ಜ್ವರ ಕಾಣಿಸಿಕೊಂಡ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಸಚಿವ ಸತ್ಯೇಂದರ್ ಜೈನ್ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಹಾಗೂ ಅವರೊಂದಿಗೆ ಸಭೆಗಳನ್ನು ನಡೆಸಿದ್ದವರಿಗೂ ಸೋಂಕು ಹರಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕೊರೊನಾ ಸೋಂಕು ದೃಢಪಡುವ ಒಂದು ವಾರಕ್ಕೆ ಮುಂಚಿತವಾಗಿ ಸತ್ಯೇಂದರ್ ಜೈನ್ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಪ್ರಮುಖವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಕೇಂದ್ರ ಹಾಗೂ ದೆಹಲಿ ರಾಜಕೀಯದ ಪ್ರಮುಖರ ಆರೋಗ್ಯದ ಮೇಲೆ ಅನುಮಾನಗಳು ವ್ಯಕ್ತವಾಗುತ್ತಿವೆ.
ಸತ್ಯೇಂದರ್ ಜೈನ್ ಪಾಲ್ಗೊಂಡ ಸಭೆಗಳಲ್ಲಿ ಅತಿ ಪ್ರಮುಖವಾದುದು ಕೇಂದ್ರ ಗೃಹ ಕಚೇರಿಯಲ್ಲಿ ನಡೆದ ಸಭೆ. ಈ ಸಭೆ ಜೂನ್ 14ರಂದು ನಡೆದಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳಲು ಒಂದೇ ಕಾರಿನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆಗೂಡಿ ಸತ್ಯೇಂದರ್ ಜೈನ್ ಕೇಂದ್ರ ಗೃಹ ಕಚೇರಿ ತಲುಪಿದ್ದರು.
ಈ ಸಭೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಆರೋಗ್ಯ ಮಂತ್ರಿ ಹರ್ಷವರ್ಧನ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಪಾಲ್ಗೊಂಡಿದ್ದರು.
ಇದೇ ದಿನ ಅಮಿತ್ ಶಾ, ಅನಿಲ್ ಬೈಜಾಲ್, ಕೇಜ್ರಿವಾಲ್ ದೆಹಲಿಯ ಮೂರು ಮಹಾನಗರಗಳ ಪಾಲಿಕೆ ಮೇಯರ್ಗಳ ಜೊತೆ ಕೊರೊನಾ ನಿಯಂತ್ರಣದ ಕುರಿತು ಚರ್ಚೆ ನಡೆಸಿದ್ದರು. ನಂತರ ಅನಿಲ್ ಬೈಜಾಲ್ ಛಟ್ಟಪುರದ ರಾಧಾಸ್ವಾಮಿ ಸತ್ಸಂಗ ಭವನದ ಬಳಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ ಕಾಮಗಾರಿಯನ್ನು ವೀಕ್ಷಿಸಿದ್ದರು. ನಂತರದ ದಿನ ಅಂದ್ರೆ ಜೂನ್ 15ರಂದು ಅಮಿತ್ ಶಾ ಸರ್ವಪಕ್ಷ ಸಭೆಯನ್ನು ನಡೆಸಿ, ಲೋಕನಾಯಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಸಚಿವ ಸತ್ಯೇಂದರ್ ಜೈನ್ಗೆ ಕೊರೊನಾ ಸೋಂಕು ದೃಢಪಟ್ಟ ಮೇಲೆ ಯಾವ ರಾಜಕೀಯ ನಾಯಕರಿಗೆ, ಮಂತ್ರಿಗಳಿಗೆ ಕ್ವಾರಂಟೈನ್ ವಿಧಿಸಲಾಗಿದೆ.? ಸೋಂಕಿತ ಸಚಿವರ ಸಂಪರ್ಕಿತರನ್ನು ಶೋಧಿಸುವ ಪ್ರಯತ್ನವನ್ನು ಆರೋಗ್ಯ ಇಲಾಖೆ ಮಾಡಿದೆಯೇ..? ಎಂಬ ಅನುಮಾನಗಳು ಕಾಡುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ.