ನವದೆಹಲಿ: ಎಎಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್ಜೀತ್ ಸಿಂಗ್ ಚಹಾಲ್ ಮತ್ತು ಬಿಜೆಪಿ ವಕ್ತಾರ ಅಶೋಕ್ ಗೋಯೆಲ್ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ರಾಜ್ಘಾಟ್ನಲ್ಲಿ ಪ್ರತಿಭಟನೆ ವೇಳ ಸಾಮಾಜಿಕ ಅಂತರದ ನಿಯಮ ಉಲ್ಲಂಘನೆ ಮಾಡಿದ ಬಿಜೆಪಿ ನಾಯಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ಪ್ರತಿಭಟನೆ, ಸಭೆ ಸಮಾರಂಭ ನಡೆಸಲು ಅನುಮತಿ ಇಲ್ಲ.
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಕೇಜ್ರಿವಾಲ್ ಸರ್ಕಾರದ ಅಸಮರ್ಥವಾಗಿದೆ ಎಂದು ಬಿಜೆಪಿ ನಿರಂತರವಾಗಿ ಟೀಕಿಸುತ್ತಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಎಎಪಿ ಸರ್ಕಾರ ನಿದ್ರಿಸುತ್ತಿದ್ದು, ಅಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್ಜೀತ್ ಸಿಂಗ್ ಚಾಹಲ್ ಆರೋಪಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಒಂದು ದಿನಕ್ಕೆ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರಗಳ ಕಾಲ ರಾಷ್ಟ್ರ ರಾಜಧಾನಿಯ ಗಡಿ ಮುಚ್ಚಲಾಗುವುದು ಎಂದು ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.