ನವದೆಹಲಿ: ದೇಶಾದ್ಯಂತ ಏಕರೂಪದ ನಾಗರಿಕ ಸಂಹಿತೆ ಜಾರಿ ಕುರಿತ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಲಿದ್ದು, ಈ ಬಗ್ಗೆ ಕೇಂದ್ರದ ಉತ್ತರವನ್ನು ಕೋರಿದೆ.
ಎಲ್ಲಾ ನಾಗರಿಕರಿಗೆ ಸಾಮಾನ್ಯ ನಾಗರಿಕ ಸಂಹಿತೆ ಪರಿಚಯಿಸುವುದು 44ನೇ ವಿಧಿಯ ಹಿಂದಿನ ಆಲೋಚನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಂವಿಧಾನವು ಆತ್ಮಸಾಕ್ಷಿಯ ಮತ್ತು ಧರ್ಮದ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಆದರೆ, ಅದು ವೈಯಕ್ತಿಕ ಕಾನೂನು ಮತ್ತು ಸಾಮಾಜಿಕ ಸಂಬಂಧಗಳಿಂದ ಮತ್ತು ಆನುವಂಶಿಕತೆಯನ್ನು ನಿಯಂತ್ರಿಸುವ ಕಾನೂನುಗಳಿಂದ ಧರ್ಮವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತದೆ ಎಂದು ಹೇಳಲಾಗಿದೆ.
ಅಲ್ಲದೆ 14ನೇ ವಿಧಿಯಡಿಯಲ್ಲಿ ಖಾತರಿಪಡಿಸುವ ಸಮಾನತೆಯ ಹಕ್ಕು, 15ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ತಾರತಮ್ಯದ ವಿರುದ್ಧದ ಹಕ್ಕು ಮತ್ತು 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸದೆ ರಕ್ಷಿಸಲಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಿದೆ.
ಕೆಲವು ದಿನಗಳ ಹಿಂದೆ ಆಡಳಿತಾರೂಢ BJP ಬಿಜೆಪಿ ತನ್ನ ರಾಜ್ಯಸಭೆಯ ಎಲ್ಲಾ ಸಂಸದರಿಗೆ ಸದನದಲ್ಲಿ ಹಾಜರಿದ್ದು ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಬೇಕೆಂದು ಸುತ್ತೋಲೆ ಹೊರಡಿಸಿದ ನಂತರ ಏಕರೂಪದ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಬಹುದೆಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಲಾಗಿತ್ತು.
ಏಕರೂಪದ ನಾಗರಿಕ ಸಂಹಿತೆ ಎಂದರೇನು?
ದೇಶವೊಂದರ ನಿವಾಸಿಗಳಾಗಿರುವ ವ್ಯಕ್ತಿಗಳ ಧರ್ಮ, ಜಾತಿ ಮತ್ತು ಪಂಗಡ ಯಾವುದೇ ಆಗಿರಲಿ ಎಲ್ಲರಿಗೂ ಜಾತ್ಯತೀತ ಪೌರ ಕಾನೂನುಗಳು ಅನ್ವಯವಾಗುತ್ತವೆ.
ಏಕರೂಪದ ನಾಗರಿಕ ಸಂಹಿತೆಯನ್ನ ಅಂಗೀಕರಿಸಿದರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳಲ್ಲಿ ಅಲ್ಪಸಂಖ್ಯಾತರಲ್ಲಿರುವ ಪ್ರತ್ಯೇಕ ನಾಗರಿಕ ಕಾನೂನುಗಳು ರದ್ದುಗೊಳ್ಳುತ್ತವೆ.