ಹೊಸದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಗೆ ಐದು ಅಂಶಗಳ 5T ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಮಹಾನಗರದ ಕೋವಿಡ್-19 ಹಾಟ್ಸ್ಪಾಟ್ ಪ್ರದೇಶಗಳಲ್ಲಿ 1 ಲಕ್ಷ ಮಾದರಿ ಟೆಸ್ಟ್ ಕೈಗೊಳ್ಳಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ದೆಹಲಿ ಸರ್ಕಾರದ ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆ, ಜಿಬಿ ಪಂತ್ ಆಸ್ಪತ್ರೆ, ರಾಜೀವ ಗಾಂಧಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗಳನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲು ಆಸ್ಪತ್ರೆಗಳನ್ನಾಗಿ ಮಾಡಲಾಗಿದೆ ಎಂದರು.
ಪ್ರಸ್ತುತ ನಗರದ ವಿವಿಧ ಆಸ್ಪತ್ರೆಗಳಲ್ಲಿ 2,950 ಬೆಡ್ಗಳನ್ನು ಕೋವಿಡ್ಗಾಗಿ ಕಾಯ್ದಿರಿಸಲಾಗಿದೆ. ಒಂದೊಮ್ಮೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದಲ್ಲಿ 12,000 ಹೋಟೆಲ್ ಕೋಣೆಗಳನ್ನು ದೆಹಲಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲಿದೆ. ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದವರ ಮೊಬೈಲ್ ಸಂಖ್ಯೆಗಳನ್ನು ಪೊಲೀಸರಿಗೆ ನಾವು ನೀಡಲಿದ್ದೇವೆ. ಇದರಿಂದ ಅವರನ್ನು ಹುಡುಕಲು ಸಾಧ್ಯವಾಗಲಿದೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದರು.
5T ಕ್ರಿಯಾಯೋಜನೆಯು ಸೋಂಕು ಪತ್ತೆ (testing), ಹುಡುಕುವಿಕೆ (tracing), ಚಿಕಿತ್ಸೆ (treatment), ತಂಡವಾಗಿ ಕೆಲಸ (team work), ಟ್ರ್ಯಾಕಿಂಗ್ (tracking) ಹಾಗೂ ನಿಗಾ ವಹಿಸುವಿಕೆಗಳನ್ನು ಒಳಗೊಂಡಿದೆ. ಸಂಭವನೀಯ 30 ಸಾವಿರ ಕೋವಿಡ್-19 ಸೋಂಕಿತ ಪ್ರಕರಣಗಳನ್ನು ನಿಭಾಯಿಸುವಷ್ಟು ಸಿದ್ಧತೆಗಳನ್ನು ಸರ್ಕಾರ ಈಗಾಗಲೇ ಮಾಡಿಕೊಂಡಿದೆ. ಹೆಚ್ಚುವರಿಯಾಗಿ ಇನ್ನೂ 8 ಸಾವಿರ ಬೆಡ್ಗಳ ವ್ಯವಸ್ಥೆ ಮಾಡಲಾಗುವುದು ಎಂದು ಕೇಜ್ರಿವಾಲ್ ವಿವರಿಸಿದರು.