ಹೊಸದಿಲ್ಲಿ: ದೆಹಲಿ ರಾಜ್ಯ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಮಾಡುವ 18 ಆರೋಗ್ಯ ಕಾರ್ಯಕರ್ತ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಬಂದ್ ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 19 ಕ್ಯಾನ್ಸರ್ ರೋಗಿಗಳನ್ನು ಬೇರೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.
"ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದ್ದು, ಕೆಲ ಚಿಕಿತ್ಸಾ ವಿಭಾಗಗಳನ್ನು ಮುಚ್ಚಿದ್ದೇವೆ. ಇಲ್ಲಿನ 19 ಕ್ಯಾನ್ಸರ್ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಧರ್ಮಶಿಲಾ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಈ ಕುರಿತು ಮಾತುಕತೆ ನಡೆದಿವೆ." ಎಂದು ಕ್ಯಾನ್ಸರ್ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಬಿ.ಎಲ್. ಶೇರ್ವಾಲ್ ಹೇಳಿದ್ದಾರೆ.
"ಇಲ್ಲಿನ ರೋಗಿಗಳನ್ನು ಬೇರೆಡೆ ಕಳುಹಿಸುವ ಮುನ್ನ ಅವರಿಗೆ ಕೋವಿಡ್-19 ಟೆಸ್ಟ್ ಮಾಡಲಾಗುವುದು. ಕ್ಯಾನ್ಸರ್ ರೋಗಿಗಳ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಅವರ ಆರೋಗ್ಯಕ್ಕೆ ಅಪಾಯವಾಗುವ ಸಂಭವಗಳು ಹೆಚ್ಚು. ಅವರ ಟೆಸ್ಟ್ ವರದಿಗಳು ನೆಗೆಟಿವ್ ಬಂದಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು." ಎಂದು ಶೇರ್ವಾಲ್ ತಿಳಿಸಿದರು.
ಕ್ಯಾನ್ಸರ್ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿದಂತೆ 16 ನರ್ಸಿಂಗ್ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿರುವುದು ಆತಂಕ ಮೂಡಿಸಿದೆ.