ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ನಗರದ 21 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಆರಂಭಿಕ ಮಾಹಿತಿ ಪ್ರಕಾರ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಆರಂಭಿಕ ಮುನ್ನಡೆ ಪಡೆದುಕೊಂಡಿದೆ. 70 ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷವೊಂದು ಅಧಿಕಾರ ಹಿಡಿಯಲು 36 ಸ್ಥಾನಗಳನ್ನು ಗೆಲ್ಲಬೇಕಿದೆ. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಕಳೆದ ಬಾರಿ ಭಾರಿ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿಯೂ ಆ ಪಕ್ಷ ಅದೇ ಹಾದಿಯಲ್ಲಿದೆ.

70 ಕ್ಷೇತ್ರಗಳ ಫಲಿತಾಂಶ ಲಭ್ಯವಿದ್ದು ಇದರಲ್ಲಿ 53 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ ಪಡೆದರೆ, ಬಿಜೆಪಿ ಕೇವಲ 17 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಇತ್ತೀಚಿನ ವರದಿ ಪ್ರಕಾರ ಆಪ್ 22 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದರೆ, ಬಿಜೆಪಿ ಕೇವಲ 9ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಕ್ಷಣಕ್ಷಣಕ್ಕೂ ಈ ಫಲಿತಾಂಶ ಬದಲಾವಣೆ ಕಾಣಲಿದೆ. ಶನಿವಾರ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಶೇ. 62.59 ಮತದಾನ ಪ್ರಮಾಣ ದಾಖಲಾಗಿತ್ತು. 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.5 ರಷ್ಟು ಕಡಿಮೆ ದಾಖಲಾಗಿದೆ. ಬಲ್ಲಿಮರನ್ ವಿಧಾನಸಭಾ ಕ್ಷೇತ್ರದಲ್ಲಿ ಶೇ. 71.6 ರಷ್ಟು ಅತಿ ಹೆಚ್ಚು ಮತದಾನದ ಪ್ರಮಾಣ ದಾಖಲಾಗಿದ್ದರೆ, ದೆಹಲಿ ಕಂಟೋನ್ಮೆಂಟ್‌ನಲ್ಲಿ ಶೇ. 45.4 ರಷ್ಟು ಅತಿ ಕಡಿಮೆ ಮತದಾನ ಪ್ರಮಾಣ ದಾಖಲಾಗಿದೆ.

ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಿಳಿಸಿದ್ದು, ಇತ್ತ ಬಿಜೆಪಿಯು, ಸಿಎಎ ವಿರೋಧಿ ಪ್ರತಿಭಟನೆ ಹಾಗೂ ರಾಷ್ಟ್ರೀಯತೆಯನ್ನು ಕೇಂದ್ರವಾಗಿಟ್ಟುಕೊಂಡು ಅಬ್ಬರದ ಪ್ರಚಾರ ನಡೆಸಿತ್ತು.
