ಮಧ್ಯಪ್ರದೇಶ : ಕೊರೊನಾ ಸಾಂಕ್ರಾಮಿಕ ಸೋಂಕಿನ ವಿರುದ್ಧ ಹೋರಾಡಲು ಇಡೀ ದೇಶ ಗಮನ ಹರಿಸುತ್ತಿದ್ದಾಗ, ಮಾರ್ಚ್ 23 ರ ರಾತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಲಾಲಾಜಿ ಟಂಡನ್, ಸಿಂಗ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮರುದಿನವೇ ಶಿವರಾಜ್ ಸಿಂಗ್ ಚವ್ಹಾಣ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹಿಷ್ಕಾರದ ನಡುವೆಯೇ ವಿಶ್ವಾಸಮತ ಗೆಲ್ಲುವ ಮೂಲಕ ಸರ್ಕಾರದ ಬಹುಮತ ಸಾಬೀತುಪಡಿಸಿದರು.
15 ತಿಂಗಳ ಅಂತರದ ನಂತರ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ದಾಖಲೆಯ 4ನೇ ಬಾರಿಗೆ ಅಧಿಕಾರ ವಹಿಸಿಕೊಂಡರು. ಆ ಮೂಲಕ ಚುನಾವಣೆಯಲ್ಲಿ ಸೋತ ಇನ್ನೊಂದು ರಾಜ್ಯವನ್ನು ಬಿಜೆಪಿ ತನ್ನ ಚಾಣಾಕ್ಷತನದಿಂದ ಅಧಿಕಾರದ ತೆಕ್ಕೆಗೆ ತೆಗೆದುಕೊಂಡಿತು.
ಕಾಂಗ್ರಸ್‌ನ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮಾರ್ಚ್ 10 ರಂದು ಪಕ್ಷಕ್ಕೆ ವಿದಾಯ ಹೇಳುವ ಮೂಲಕ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಆರಂಭಗೊಂಡಿತು. ಇದು ಕಾಂಗ್ರೆಸ್ಸಿನ 6 ಸಚಿವರೂ ಸೇರಿದಂತೆ 22 ಶಾಸಕರ ರಾಜಿನಾಮೆಗೆ ಮುನ್ನುಡಿ ಬರೆಯಿತು.
ಇವರೆಲ್ಲರೂ ಸಿಂಧಿಯಾ ಬೆಂಬಲಿಗರು. ಶಾಸಕರ ರಾಜೀನಾಮೆ ಹೊರತುಪಡಿಸಿ, ಅಲ್ಲಿನ ಸಭಾಪತಿಗಳು ಆರು ಸಚಿವರ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಿದರು. ಇದರಲ್ಲಿ ಹೆಚ್ಚಿನ ಶಾಸಕರು ವಿಮಾನದ ಮೂಲಕ ಬೆಂಗಳೂರಿಗೆ ದೌಡಾಯಿಸ್ತಾರೆ. ಇವರೆಲ್ಲರನ್ನು ಬಲವಂತವಾಗಿ ಬೆಂಗಳೂರಿನಲ್ಲಿ ಅಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ತಕ್ಷಣವೇ ಮಧ್ಯಪ್ರದೇಶದ ರಾಜ್ಯಪಾಲರು ಸಭಾಪತಿಗೆ ಪತ್ರ ಬರೆದು ಮಾರ್ಚ್ 16 ರಂದು ಸರ್ಕಾರಕ್ಕೆ ವಿಶ್ವಾಸಮತ ಯಾಚಿಸುವಂತೆ ಸೂಚಿಸಬೇಕಾಗಿ ತಿಳಿಸಿದರು.
ಆದರೆ ಸಭಾಪತಿಯಾದ ಎನ್.ಪಿ.ಪ್ರಜಾಪತಿ ವಿಶ್ವಾಸಮತ ಯಾಚನಾ ಪ್ರಕ್ರಿಯೆಯನ್ನು ವಿಳಂಬ ಮಾಡುವ ಕಾರ್ಯತಂತ್ರ ಅನುಸರಿಸಿದಾಗ ಬಿಜೆಪಿ ಸುಪ್ರೀಂಕೋರ್ಟ್ ಮೊರೆ ಹೋಗಿ ತಕ್ಷಣವೇ ವಿಶ್ವಾಸ ಮತಯಾಚನೆಗೆ ಸದನ ಕರೆಯುವಂತೆ ಸಭಾಪತಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಕೋರಿತು.
ಮಾರ್ಚ್ 19ರಂದು ಸುಪ್ರೀಂಕೋರ್ಟ್ ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಹೇಮಂತ್ ಗುಪ್ತ ಅವರನ್ನೊಳಗೊಂಡ ವಿಭಾಗೀಯ ಪೀಠ ಎರಡು ದಿನಗಳ ವಿಚಾರಣೆ ನಡೆಸಿ ವಿಶೇಷ ಅಧಿವೇಶನ ನಡೆಸಿ ಮರುದಿನವೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸಬೇಕೆಂದು ಸಭಾಪತಿಗಳಿಗೆ ನಿರ್ದೇಶನ ನೀಡಿತು.
ಮುಖ್ಯಮಂತ್ರಿ ಕಮಲನಾಥ್ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಆರಂಭದ ಒಂದು ಗಂಟೆ ಮೊದಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. 22 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಬಹುಮತದ ಕೊರತೆ ಇತ್ತು. 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ (ಇಬ್ಬರು ಮರಣ ಹೊಂದಿದ ಸದಸ್ಯರೂ ಸೇರಿದಂತೆ) ಇತರ ಏಳು ಶಾಸಕರ ಬೆಂಬಲದೊಂದಿಗೆ (ಬಿ.ಎಸ್.ಪಿ, ಎಸ್.ಪಿ ಹಾಗೂ ಪಕ್ಷೇತರರು) ಕಾಂಗ್ರೆಸ್ ಬಲ 114 ಆಗಿತ್ತು.
ಇದೇ ಸಂದರ್ಭದಲ್ಲಿ ಬಿಜೆಪಿ 107 ಶಾಸಕ ಬಲ ಹೊಂದಿತ್ತು. 27 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಮಧ್ಯಪ್ರದೇಶ ವಿಧಾನಸಭೆಯ ಸದಸ್ಯರ ಸಂಖ್ಯಾಬಲ 208ಕ್ಕೆ ಇಳಿದಿತ್ತು. ಹಾಗಾಗಿ ಬಹುಮತ ಸಾಬೀತು ಪಡಿಸಲು 104 ಶಾಸಕರ ಅಗತ್ಯವಿತ್ತು. ಇದರಿಂದಾಗಿ ಬಿಜೆಪಿ ಸರ್ಕಾರ ರಚನೆಯ ಹಕ್ಕು ಮಂಡಿಸಿತು.
ಮಧ್ಯಪ್ರದೇಶದ ಈ ರಾಜಕೀಯ ಕುಟಿಲ ಕಾರ್ಯಾಚರಣೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸುವ ಹೊಸ ತಂತ್ರಗಾರಿಕೆಯ ದ್ಯೋತಕವಾಗಿದೆ. ಸಂವಿಧಾನದ 10ನೇ ಪರಿಚ್ಛೇದವು (ಪಕ್ಷಾಂತರ ನಿಷೇಧ ಕಾಯ್ದೆ) ಆಗಿನ ಪ್ರದಾನಿ ರಾಜೀವ್ ಗಾಂಧಿ ನೇತೃತ್ವದಲ್ಲಿ ಸಂವಿಧಾನದ 52ನೇ ತಿದ್ದುಪಡಿಯಾಗಿ 1985ರಲ್ಲಿ ಸೇರ್ಪಡೆಗೊಂಡಿತು.
ಆ ತಿದ್ದುಪಡಿಯನ್ನು ಆಗಿನ ಕಾಲಘಟ್ಟದ 'ಆಯಾ ರಾಮ್ ಗಯಾ ರಾಮ್' ರಾಜಕೀಯಕ್ಕೆ ಕಡಿವಾಣ ಹಾಕಲು ಜಾರಿಗೆ ತರಲಾಗಿತ್ತು. ಆಗ ಶಾಸಕರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವುದು ಸಾಮಾನ್ಯವಾಗಿತ್ತು. (ಹರಿಯಾಣ ಶಾಸಕ ಗಯಾ ರಾಮ್ ಒಂದೇ ದಿನದಲ್ಲಿ 3 ಪಕ್ಷಗಳನ್ನು ಬದಲಾಯಿಸಿದ್ದರು).
ಸಂವಿಧಾನದ 10ನೇ ಪರಿಚ್ಛೇದದಲ್ಲಿ ಶಾಸಕರು ಪಕ್ಷಾಂತರ ಮಾಡಿದರೆ ಅನರ್ಹಗೊಳ್ಳುತ್ತಾರೆ. ಬಹಳಷ್ಟು ವರ್ಷಗಳ ಕಾಲ ಈ ಕಾಯ್ದೆ ಶಾಸಕರು ಪದೇ ಪದೇ ಪಕ್ಷ ಬದಲಾಯಿಸುವುದಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರ ಮೂಲಕ ಈ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ. ರಾಜೀನಾಮೆ ನೀಡುವ ಮೂಲಕ ಚುನಾಯಿತ ಸರ್ಕಾರವನ್ನು ಅಲ್ಪಮತಕ್ಕಿಳಿಸಿ ಅದನ್ನು ಉರುಳಿಸುವ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ.
ಈ ಸಂಪ್ರದಾಯದ ಪ್ರಕಾರ ಆಡಳಿತ ಪಕ್ಷತ ಶಾಸಕರನ್ನು ರಾಜೀನಾಮೆ ಕೊಡಿಸಿ ವಿಶೇಷ ವಿಮಾನದ ಮೂಲಕ ಅವರನ್ನು ರೆಸಾರ್ಟ್‌ಗೆ ಕೊಂಡೊಯ್ದು, ಆಯಾ ಪಕ್ಷದ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಅವಕಾಶ ಮಾಡಿಕೊಡದಿರುವುದು ಈ ತಂತ್ರಗಾರಿಕೆಯ ಭಾಗವಾಗಿದೆ.
ತದನಂತರ ವಿಧಾನಸಭೆಯ ಸದಸ್ಯ ಬಲವನ್ನು ಕುಗ್ಗಿಸಿ ರಾಜ್ಯಪಾಲರ ಸಹಾಯದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದೆ. ನಂತರ ಬರುವ ಉಪಚುನಾವಣೆಯಲ್ಲಿ ಬಂಡಾಯ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ನೀಡಿ ಗೆಲ್ಲಿಸಲಾಗುತ್ತಿದೆ. ಕಳೆದ ವರ್ಷ ಇದೇ ತಂತ್ರಗಾರಿಕೆ ಬಳಸಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲಾಗಿತ್ತು.
ಅನರ್ಹಗೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಬಿಜೆಪಿ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿತ್ತು. ಇದರಲ್ಲಿ ಬಹುತೇಕ ಬಿಜೆಪಿ ಅಭ್ಯರ್ಥಿಗಳು ಗೆದ್ದು ತದನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದಾರೆ. ಈ ರಾಜಕೀಯ ತಂತ್ರಗಾರಿಕೆ ಮಧ್ಯಪ್ರದೇಶದಲ್ಲಿ ಕೂಡ ಪುನರಾವರ್ತನೆಗೊಳ್ಳಲಿದೆ. ಅಲ್ಲಿ ಕಾಂಗ್ರಸ್ ಬಂಡಾಯ ಅಧ್ಯರ್ಥಿಗಳಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿ ಅವರನ್ನು ಗೆಲ್ಲಿಸುವ ತಂತ್ರಗಾರಿಕೆ ಮಾಡಲಾಗುತ್ತಿದೆ. ಇದೊಂದು ಅಧಿಕಾರ ಗಳಿಸುವ ಅ ಮೂಲಕ ಚುನಾಯಿತ ಸರ್ಕಾರವನ್ನು ಪತನಗೊಳಿಸುವ ಅತ್ಯಂತ ಅಪಾಯಕಾರಿ ರಾಜಕೀಯ ತಂತ್ರಗಾರಿಕೆಯಾಗಿದೆ.
ಇಂತಹ ಕುಟಿಲ ರಾಜಕೀಯ ತಂತ್ರಗಾರಿಕೆ ಪಕ್ಷಾಂತರ ನಿಷೇಧ ಕಾಯ್ದೆಯ ಉದ್ದೇಶವನ್ನು ವಿಫಲಗೊಳಿಸುತ್ತದೆ ಮತ್ತು ಚುನಾವಣೆಯಲ್ಲಿ ಜನರು ಒಂದು ಪಕ್ಷಕ್ಕೆ ನೀಡಿರುವ ಜನಾದೇಶಕ್ಕೆ ಬಗೆಯುವ ದ್ರೋಹವಾಗಿದೆ. ಇಂತಹ ಘಟನೆಗಳ ಪುನರಾವರ್ತನೆಯಿಂದ ಭಾರತದ ಜನತಂತ್ರದ ಆರೋಗ್ಯದ ಕುರಿತು ಗಂಭೀರ ಪ್ರಶ್ನೆ ಎದುರಾಗಿದೆ.
ಈ ತಂತ್ರಗಾರಿಕೆಯನ್ನು ಉಪಚುನಾವಣೆಯಲ್ಲಿ ಗೆದ್ದು ಬಂದು ಜನಾದೇಶ ತಮ್ಮ ಪರವಾಗಿದೆ ಎಂದು ಬಿಜೆಪಿ ಪಕ್ಷ ಸಮರ್ಥಿಸಬಹುದಾದರೂ ಈ ಉಪ ಚುನಾವಣೆಗಳು ನಡೆಯುವುದು ಬಿಜೆಪಿ ಸರ್ಕಾರ ರಚಿಸಿದ ನಂತರವೇ. ಯಾವಾಗಲೂ ಆಡಳಿತ ಪಕ್ಷ ಉಪಚುನಾವಣೆಯಲ್ಲಿ ಮೇಲ್ಗೈ ಸಾಧಿಸುವುದು ಸಾಮಾನ್ಯ. ಈ ತಂತ್ರಗಾರಿಕೆ ಮೂಲಕ ಅಧಿಕಾರ ಹಿಡಿಯುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅಸ್ತಿತ್ವ ಕಳೆದುಕೊಂಡಿದೆ.
ಪಕ್ಷಾಂತರ ನಿಷೇಧ ಕಾಯ್ದೆಯ ಉದ್ದೇಶ ಸಫಲವಾಗಬೇಕಾದರೆ ಅದರಲ್ಲಿ ಸಮೂಹ ಪಕ್ಷಾಂತರ ತಡೆಗೆ ಹೊಸ ಸುಧಾರಣೆ ಆಗಬೇಕಾಗಿದೆ. ಅನರ್ಹಗೊಂಡ ಶಾಸಕರನ್ನು ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವುದರ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಗೊಳಿಸಬಹುದಾಗಿದೆ. ಉಪ ಚುನಾವಣೆ ನಡೆಸದೆ ಯಾವುದೇ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬಾರದು.
ಆದ್ದರಿಂದ ಇನ್ನು ಮುಂದೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳದಂತೆ ತಡೆಯಲು ಅದರಲ್ಲಿರುವ ನೀತಿನಿಯಮಗಳ ಕುರಿತು ಪುನರ್ ಗಮನಹರಿಸಲು ಸಂಸತ್ ಮುಂದಾಗಬೇಕಿದೆ.