ಲುಕುಂಗ್(ಲಡಾಖ್): ಭಾರತದ ಒಂದಿಂಚೂ ಭೂಮಿಯನ್ನು ಯಾರಿಂದಲೂ ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.
ಭಾರತ - ಚೀನಾ ಗಡಿ ನಿಯಂತ್ರಣಾ ರೇಖೆಯ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿದ ಬಳಿಕ ಲಡಾಖ್ನ ಲುಕುಂಗ್ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಭಾರತದ ಸೇನೆಯ ಮೇಲೆ ನಮಗೆ ಅಪಾರ ಹೆಮ್ಮೆಯಿದೆ. ಯೋಧರನ್ನು ಭೇಟಿ ಮಾಡಿ, ಅವರೊಂದಿಗೆ ವಿಚಾರ-ವಿನಿಮಯ ಮಾಡಿರುವುದು ಬಹಳ ಖುಷಿ ಮತ್ತು ಹೆಮ್ಮೆ ಸಂಗತಿ. ನಮ್ಮ ಸೈನಿಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. 130 ಕೋಟಿ ಭಾರತೀಯರು ಇದರಿಂದ ಬಹಳ ದುಃಖಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆಯುತ್ತಿದೆ. ಬಿಕ್ಕಟ್ಟು ಶಮನವಾಗಲಿದೆ ಎಂಬ ಆಶಾಭಾವ ನನಗಿದೆ. ಆದರೆ ಎಷ್ಟರ ಮಟ್ಟಿಗೆ ಇದು ಸಾಧ್ಯ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ ಒಂದನ್ನಂತೂ ನಾನು ಸ್ಟಪಷ್ಟಪಡಿಸುತ್ತೇನೆ. ಏನಂದ್ರೆ ಭಾರತದ ಒಂದಿಂಚೂ ನೆಲವನ್ನು ಜಗತ್ತಿನ ಯಾವ ಶಕ್ತಿಗೂ ಮುಟ್ಟಲು ಸಾಧ್ಯವಿಲ್ಲ. ಯಾರಿಗೂ ಅತಿಕ್ರಮಿಸಲು ಬಿಡುವುದಿಲ್ಲ ಎಂದು ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ನೀಡಿದರು.
ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಏಕೈಕ ರಾಷ್ಟ್ರ ಭಾರತ. ನಾವು ಯಾವುದೇ ದೇಶದ ಮೇಲೆ ಯಾವತ್ತೂ ದಾಳಿ ಮಾಡಿಲ್ಲ. ಯಾವುದೇ ರಾಷ್ಟ್ರದ ಭೂಮಿಯನ್ನು ಅತಿಕ್ರಮಿಸಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. 'ವಸುದೈವ ಕುಟುಂಬಕಂ' ಎಂಬಂತೆ ನಮ್ಮ ದೇಶದಲ್ಲಿ ಇಡೀ ವಿಶ್ವದ ಒಂದು ಕುಟುಂಬವೇ ನೆಲೆಸಿದೆ ಎಂದರು.
ಲಡಾಖ್ನ ಲುಕುಂಗ್ನಲ್ಲಿ ಭಾರತೀಯ ಭೂ ಸೇನಾ ಯೋಧರು ಮತ್ತು ಇಂಡೋ-ಟಿಬೇಟ್ ಗಡಿ ಪೊಲೀಸ್ ಪಡೆಯ ಸಿಬ್ಬಂದಿ (ಐಟಿಬಿಪಿ) ಜತೆ ರಾಜನಾಥ್ ಸಿಂಗ್ ವಿಚಾರ-ವಿನಿಮಯ ನಡೆಸಿದರು. ಇದಕ್ಕೂ ಮುನ್ನ ರಕ್ಷಣಾ ಸಚಿವರು ಭಾರತೀಯ ಸೇನಾ ಪಡೆಯ ಯುದ್ಧ ಕೌಶಲ್ಯವನ್ನು ವೀಕ್ಷಿಸಿದ್ದರು. ರಾಜನಾಥ್ ಸಿಂಗ್, ಲಡಾಖ್ ಮತ್ತು ಶ್ರೀನಗರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.