ಭಿವಂಡಿ (ಮಹಾರಾಷ್ಟ್ರ) : ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ ಎಂದು ಎನ್ಡಿಆರ್ಎಫ್ ಮೂಲಗಳು ತಿಳಿಸಿವೆ.
ಭಿವಂಡಿ ಪಟ್ಟಣದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಸೋಮವಾರ (ಸೆ. 21) ಈ ದುರ್ಘಟನೆ ಸಂಭವಿಸಿತ್ತು. 1984ರಲ್ಲಿ ನಿರ್ಮಾಣವಾಗಿದ್ದ 21 ಫ್ಲ್ಯಾಟ್ಗಳಿದ್ದ ಜಿಲಾನಿ ಹೆಸರಿನ ಕಟ್ಟಡ ದುರ್ಬಲವಾಗಿತ್ತು ಎಂದು ಹೇಳಲಾಗಿದೆ.
ಪ್ರಕರಣದ ತನಿಖೆಗಾಗಿ ಥಾಣೆ ಜಿಲ್ಲೆಯ ಹೆಚ್ಚುವರಿ ಆಯುಕ್ತ ಓಂಪ್ರಕಾಶ್ ದಿವ್ತೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈಗಾಗಲೇ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಈ ಘಟನೆ ಸಂಬಂಧ ವಜಾಗೊಳಿಸಲಾಗಿದ್ದು, ಕಟ್ಟಡದ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.