ನವದೆಹಲಿ: ಸೂಕ್ತ ಭದ್ರತೆಗಾಗಿ ದೇಶಾದ್ಯಂತ ವೈದ್ಯರು ಮುಷ್ಕರ ಹೂಡಿ, ಆನಂತರ ಹಿಂತೆಗೆದುಕೊಂಡ ಬೆನ್ನಲ್ಲೇ ನವದೆಹಲಿಯ ಆಸ್ಪತ್ರೆಯೊಂದರ ಮೇಲೆ ಉದ್ರಿಕ್ತ ಜನರು ದಾಳಿ ಮಾಡಿರುವ ಘಟನೆ ನಡೆದಿದೆ.
ನವದೆಹಲಿಯ ಮಹರ್ಷಿ ಮಾಲ್ಮೀಕಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯನ್ನು ತಳ್ಳಾಡಿ, ಆಸ್ಪತ್ರೆಯ ವಸ್ತುಗಳನ್ನು ಧ್ವಂಸ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗ್ತಿದೆ.
ಆಗಿದ್ದೇನು?
ಮನೆಯ ಬಳಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಗೆ 45 ವರ್ಷ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಸಂಬಂಧಿಕರು ಆರೋಪಿಸಿದ್ದರು. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದ ಕುಟುಂಬ, ನೇರವಾಗಿ ವಾಲ್ಮೀಕಿ ಆಸ್ಪತ್ರೆಗೆ ಮಗುವನ್ನ ದಾಖಲಿಸಿತ್ತು.
ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ರಾಜೀವ್ ಸಾಗರ್ ಹೇಳಿದಂತೆ, ಲೈಂಗಿಕ ದೌರ್ಜನ್ಯಕ್ಕೀಡಾದ ಬಾಲಕಿಯನ್ನು ಆಸ್ಪತ್ರೆಗೆ ಕರೆತಂದರು. ಅಗತ್ಯ ಪರೀಕ್ಷೆಗಳನ್ನು ನಡೆಸಲಾಯ್ತು. ಆನಂತರ ಲೇಬರ್ ರೂಂಗೆ ಕಳಿಸಲಾಯ್ತು. ಮತ್ತಿತರ ತುರ್ತು ಪರೀಕ್ಷೆಗಳನ್ನು ನಡೆಸುವ ಅಗತ್ಯವಿತ್ತು. ಆದರೆ ನಮ್ಮ ತುರ್ತು ಸೇವೆಗಳು ಸಂಜೆ 4 ಗಂಟೆಗೆ ಕ್ಲೋಸ್ ಆಗಿದ್ದವು. ಹಾಗಾಗಿ, ಇಲ್ಲಿಂದ 8 ಕಿ.ಮೀ. ದೂರದ ಡಾ. ಬಿಎಸ್ಎ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದೆವು. ಅಷ್ಟಕ್ಕೇ ಕೆಲ ಮಂದಿ ಗಲಾಟೆ ಮಾಡಿ, ಆಸ್ಪತ್ರೆಯಲ್ಲಿನ ವಸ್ತುಗಳನ್ನು ಧ್ವಂಸ ಮಾಡಿದರು. ಇದರಿಂದ ಹೆದರಿದ ನಮ್ಮ ಸಿಬ್ಬಂದಿ ಓಡಿ ಹೋಗಲು ಯತ್ನಿದರು ಎಂದರು.
ಮತ್ತೆ ಕೆಲವರು ಸಿಬ್ಬಂದಿಯನ್ನು ಹೊಡೆಯಲು ಮುಂದಾದರು. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ದೂರನ್ನೂ ನೀಡಲಾಗುತ್ತೆ ಎಂದಿದ್ದಾರೆ. ಇನ್ನು ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಗೆ ಎಲ್ಲ ರೀತಿಯ ಪರೀಕ್ಷೆಗಳು ಮುಗಿದಿದ್ದು, ವರದಿ ಬಂದ ನಂತರವೇ ಅತ್ಯಾಚಾರವಾಗಿದೆಯೇ, ಇಲ್ಲವೇ ಎಂಬುದು ತಿಳಿಯಲಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಡೆಪ್ಯುಟಿ ಕಮಿಷನರ್ ಗೌರವ್ ಶರ್ಮ ತಿಳಿಸಿದ್ದಾರೆ.