ಬೀಕಾನೆರ್(ರಾಜಸ್ಥಾನ್): ದಲಿತ ಸಮುದಾಯದವರ ಮೇಲೆ ನಡೆಯುವ ದಾಳಿಗಳು ಅಲ್ಲಲ್ಲಿ ವರದಿಯಾಗುತ್ತಿವೆ. ರಾಜಸ್ಥಾನದ ಬೀಕಾನೇರ್ ಸದ್ಯ ಅಂತಹ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಛತರ್ಗಢದ ಖಾರ್ಬಾರಾ ಗ್ರಾಮದಲ್ಲಿ ಕೆಲವರು ದಲಿತ ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿದ್ದರು. ಸದ್ಯ ಆಕೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ.
ಛತರ್ಗಢ ಪೊಲೀಸರ ಪ್ರಕಾರ, ಫೆಬ್ರವರಿ 17ರಂದು ರಾಜಗಢ ನಿವಾಸಿ ಸತ್ಯವೀರ್ ಜಾಟ್ ನ ಹೊಟೆಲ್ಗೆ ಏನೋ ತೆಗೆದುಕೊಳ್ಳಲೆಂದು ಬಂದಿದ್ದ ಓಂ ಪ್ರಕಾಶ್ ಮೆಘವಾಲ್ ಎಂಬುವವರನಿಗೂ ಹೋಟೆಲ್ ಮಾಲಿಕ ಸತ್ಯವೀರ್ಗೂ ಜಗಳವಾಗಿತ್ತು. ಈ ವಿಚಾರವಾಗಿ ಓಂ ಪ್ರಕಾಶ್ ಮೆಘವಾಲ್ ಅವರ ಪತ್ನಿ ವಿಚಾರಿಸಲು ಹೋಟೆಲ್ಗೆ ಹೋದಾಗ ಹೋಟೆಲ್ ಮಾಲಿಕ ಸತ್ಯವೀರ್ ತನ್ನ ಮಗ, ಹೆಂಡತಿ, ಅಳಿಯನೊಂದಿಗೆ ಸೇರಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನೂ, ಈ ಕುರಿತು ಫೆಬ್ರುವರಿ 18ರಂದು ಛತರ್ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಲ್ಲೆಯಿಂದ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದ ಆಕೆಯನ್ನು ಪಿಬಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಲ್ಲೇ ಸಾವನ್ನಪ್ಪಿದ್ದಾಳೆ. ಸದ್ಯ ಮಹಿಳೆಯ ಸಾವಿನ ಹಿನ್ನೆಲೆ ಛತರ್ಗಢ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಇಬ್ಬರನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.