ಬದೌನ್ (ಉತ್ತರ ಪ್ರದೇಶ) : ಜಮೀನಿಗೆ ನೀರು ಬಿಡಲು ನಿರಾಕಿರಿಸಿದ್ದಕ್ಕೆ ರೈತನೊಬ್ಬ ಇನ್ನೋರ್ವ ರೈತನ ಶಿರಚ್ಛೇದ ಮಾಡಿದ ಘಟನೆ ಜಿಲ್ಲೆಯ ನಗರ ಶೇಖ್‌ಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ನಾಥು ಲಾಲ್ ಜಾತವ್ ಎಂಬ ದಲಿತ ರೈತ ತನ್ನ ಹೊಲಕ್ಕೆ ನೀರು ಬಿಡುತ್ತಿದ್ದ. ಈ ವೇಳೆ ಪಕ್ಕದ ಜಮೀನಿನ ಇನ್ನೋರ್ವ ರೈತ ರೂಪ್ ಕಿಶೋರ್ ತನ್ನ ಹೊಲಕ್ಕೂ ನೀರು ಬಿಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ, ರೈತ ಜಾತವ್ ನಿರಾಕರಿಸಿದ್ದ. ಇದರಿಂದ ಕೋಪಗೊಂಡ ರೂಪ್ ಕಿಶೋರ್, ಲಾಲ್ ಜಾತವ್ನ ತಲೆ ಕತ್ತರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ, ಸ್ಥಳೀಯರು ತಡೆಯಲು ಪ್ರಯತ್ನಿಸಿದರೂ ಕೇಳದ ರೂಪ್ ಕಿಶೋರ್, ಸ್ಪೇಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಕೊಲೆಯಾದ ಲಾಲ್ ಜಾತವ್ ಪುತ್ರ ಓಂಪಾಲ್, ನಾನು ಮತ್ತು ತಂದೆ ತಡ ರಾತ್ರಿಯವರೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು. ಸಮಯ ಮೀರಿದ್ದರಿಂದ ತಂದೆ ನನ್ನನ್ನು ಮನೆಗೆ ಹೋಗುವಂತೆ ಹೇಳಿದರು, ಹಾಗೆ ನಾನು ಮನೆಗೆ ಬಂದಿದ್ದೆ. ಆದರೆ, ಬೆಳಗ್ಗೆವರೆಗೆ ತಂದೆ ಮನೆಗೆ ಬಂದಿರಲಿಲ್ಲ. ಹೀಗಾಗಿ, ನೋಡಲು ನಾನು ಹೊಲದತ್ತ ಹೋಗುತ್ತಿದ್ದೆ,ಈ ವೇಳೆ ರೂಪ್ ಕಿಶೋರ್ ನನ್ನ ತಂದೆಯನ್ನು ಕೊಲೆ ಮಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದರು. ನಾನು ಸ್ಥಳಕ್ಕೆ ಹೋಗಿ ನೋಡುವಾಗ ತಂದೆಯ ದೇಹ ರುಂಡ ಮುಂಡ ಬೇರ್ಪಟ್ಟ ರೀತಿಯಲ್ಲಿ ಇತ್ತು ಎಂದು ಹೇಳಿದ್ದಾನೆ.
ರೂಪ್ ಕಿಶೋರ್ ಒಬ್ಬನೇ ಈ ಕೃತ್ಯವೆಸಗಲು ಸಾಧ್ಯವಿಲ್ಲ. ಇನ್ನೂ ಕೆಲವರು ಇದರಲ್ಲಿ ಭಾಗಿಯಾಗಿರಬಹುದು ಎಂದು ಓಂಪಾಲ್ ಶಂಕೆ ವ್ಯಕ್ತಪಡಿಸಿದ್ದಾನೆ. ಓಂಪಾಲ್ ದೂರಿನ ಆಧಾರದಲ್ಲಿ ಕೊಲೆ ಆರೋಪಿ ರೂಪ್ ಕಿಶೋರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ್ ವರ್ಮಾ ತಿಳಿಸಿದ್ದಾರೆ.