ಧರ್ಮಶಾಲಾ (ಹಿಮಾಚಲ ಪ್ರದೇಶ): ಇಂದು ಬೌದ್ಧ ಧರ್ಮ ಪ್ರತಿಪಾದಕ, ಟಿಬೆಟಿಯನ್ ಧರ್ಮಗುರು ದಲೈ ಲಾಮಾರ 85ನೇ ಜನ್ಮದಿನ. ಇದರ ಅಂಗವಾಗಿ ಕೋವಿಡ್ ಬಿಕ್ಕಟ್ಟಿನ ಈ ವರ್ಷವನ್ನು 'ಕೃತಜ್ಞತೆಯ ವರ್ಷ' ಎಂದು ಅರ್ಪಿಸುವುದಾಗಿ ಕೇಂದ್ರ ಟಿಬೆಟಿಯನ್ ಆಡಳಿತ (ಸಿಟಿಎ) ತಿಳಿಸಿದೆ.
ಆಧ್ಯಾತ್ಮಿಕ ಬೋಧನೆಗಳು ಜಗತ್ತಿನಾದ್ಯಂತ ಸಾವಿರಾರು ಜನರಿಗೆ ಸಾಂತ್ವನ, ಭರವಸೆ ಮತ್ತು ಆಶೀರ್ವಾದ ನೀಡುತ್ತವೆ. ಟಿಬೆಟಿಯನ್ನರು ಹಾಗೂ ವಿಶ್ವದಾದ್ಯಂತ ಇರುವ ನಮ್ಮ ಸ್ನೇಹಿತರು ದಲೈ ಲಾಮಾರ ಜೀವನ ಸಂದೇಶವನ್ನು ಸಾರಿ, ಜನರಲ್ಲಿ ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಿಟಿಎ ಅಧ್ಯಕ್ಷ ಲೋಬ್ಸಂಗ್ ಸಂಗೆ ಕರೆ ನೀಡಿದರು.
2020- ಈ ವರ್ಷದಲ್ಲಿ ಪ್ರಪಂಚವು ಆಘಾತಕಾರಿ ಅನುಭವದೊಂದಿಗೆ ಸಾಗುತ್ತಿದೆ. ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನ ಕೊರೊನಾಗೆ ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಸೋಂಕಿಗೆ ತುತ್ತಾಗಿರುವ ಎಲ್ಲಾ ರಾಷ್ಟ್ರಗಳ, ಪ್ರತಿಯೊಬ್ಬ ವ್ಯಕ್ತಿಯ ಪರ ಪ್ರಾರ್ಥನೆ ಮಾಡುತ್ತೇವೆ. ಭಾರತದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಜಾಗೃತರಾಗಿರುವಂತೆ ಕೇಳಿಕೊಳ್ಳುತ್ತೇವೆ. ಶಾಂತಿದೂತ ದಲೈ ಲಾಮಾರ ಮಾರ್ಗಗಳನ್ನು ಬೆಂಬಲಿಸಿದ ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆ ಮತ್ತು ಸರ್ಕಾರಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ಲೋಬ್ಸಂಗ್ ಸಂಗೆ ಹೇಳಿದರು.
ವಿಶ್ವದಾದ್ಯಂತ ನೆಲೆಸಿರುವ ಸುಮಾರು 10 ಸಾವಿರ ಟಿಬೆಟಿಯನ್ನರು ದಲೈ ಲಾಮರ 85ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಭಾರತದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಟಿಬೆಟಿಯನ್ನರು ನೆಲೆಸಿದ್ದಾರೆ.