ಮುಂಬೈ (ಮಹಾರಾಷ್ಟ್ರ): ನಿಸರ್ಗ ಚಂಡಮಾರುತದ ಹಾನಿಯನ್ನು ತಪ್ಪಿಸುವ ಸಲುವಾಗಿ ಮಹಾರಾಷ್ಟ್ರದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂಬೈಗೆ ಆಗಮಿಸಬೇಕಿದ್ದ ಹಾಗೂ ಮುಂಬೈನಿಂದ ಹೊರಡಬೇಕಿದ್ದ ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.
ಕೇಂದ್ರ ರೈಲ್ವೆಯ ಪ್ರಕಾರ, ಗೋರಖ್‌ಪುರ, ದರ್ಭಂಗಾ, ವಾರಣಾಸಿಯಿಂದ ಹೊರಡಲು ನಿರ್ಧರಿಸಿದ್ದ ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಈ ಎಲ್ಲಾ ರೈಲುಗಳು ವಿಶೇಷ ರೈಲುಗಳಾಗಿದ್ದು ಸಮಯ ಬದಲಾವಣೆಯ ವಿಚಾರವನ್ನು ಕೇಂದ್ರಿಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಭಾರತ ಹವಾಮಾನ ಇಲಾಖೆ ಪ್ರಕಾರ, ನಿಸರ್ಗ ಚಂಡಮಾರುತವು ಮಹಾರಾಷ್ಟ್ರದ ಉತ್ತರ ಕರಾವಳಿಯತ್ತ ಗಂಟೆಗೆ 13 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಮುಂದಿನ 12 ಗಂಟೆಗಳಲ್ಲಿ ಭಾರೀ ಗಾಳಿ- ಮಳೆಯಾಗುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.