ಸಿಲ್ಚಾರ್: ಅಸ್ಸೋಂನ ಬರಾಕ್ ಕಣಿವೆಯ ಸಿಲ್ಚಾರ್ ಪಟ್ಟಣದ ಬಳಿಯ ಸಲೂಗ್ರಾಮ್ ಪೊಲೀಸ್ ಹೊರ ಠಾಣೆ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.
ಸಿಲ್ಚಾರ್ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಘರ್ಷಣೆ ಸಂಭವಿಸಿದ್ದು, ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಘರ್ಷಣೆ ಹಿನ್ನೆಲೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಆಗಸ್ಟ್ 5 ರಂದು ನಿಗದಿತ ರಾಮ ಜನ್ಮಭೂಮಿ ಶೀಲಾನ್ಯಾಸ ಕಾರ್ಯಕ್ರಮದ ಬಗ್ಗೆ ಪೋಸ್ಟರಿಂಗ್ ಮಾಡುತ್ತಿದ್ದಾಗ ಯುವಕರ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಆದರೆ, ಅದಕ್ಕೂ ಬಗ್ಗದಿದ್ದಾಗ ರಬ್ಬರ್ ಗುಂಡುಗಳನ್ನ ಪೊಲೀಸರು ಹಾರಿಸಿದ್ದಾರೆ.
ಹಲವು ಗಂಟೆಗಳ ಕಾಲ ನಡೆದ ಘರ್ಷಣೆಯಲ್ಲಿ ಕನಿಷ್ಠ ಆರು ನಾಗರಿಕರು ಮತ್ತು ಸೋನ್ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘರ್ಷಣೆಗೆ ಸಂಪೂರ್ಣ ಕಾರಣ ತಿಳಿದು ಬಂದಿಲ್ಲ.