ನವದೆಹಲಿ: ಕೊರೊನಾ ವೈರಸ್ ಪರಿಣಾಮ ದೇಶಾದ್ಯಂತ ಹಲವಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಸಿಆರ್‌ಪಿಎಫ್ ಯೋಧರು ಮಾನವೀಯ ಕಾರ್ಯದಲ್ಲಿ ತೊಡಗಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿರುವ ಸಿಆರ್‌ಪಿಎಫ್ ಸೈನಿಕರು ಮತ್ತು ಅಧಿಕಾರಿಗಳು ಜನರಿಗೆ ನಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಾವಿರಾರು ವಲಸೆ ಕಾರ್ಮಿಕರು, ಬಡವರು ಮತ್ತು ದೀನ ದಲಿತರು ಮನೆಯಿಲ್ಲದವರಾಗಿದ್ದಾರೆ. ಈ ಹಿನ್ನೆಲೆ ಅವರ ಅವಶ್ಯಕತೆಗಳನ್ನು ಈಡೇರಿಸುವ ಕೆಲಸಕ್ಕೆ ಸಿಆರ್ಫಿಎಫ್ ಮುಂದಾಗಿದೆ.
ಇನ್ನು, ದೆಹಲಿ ಮತ್ತು ಇತರ ಭಾಗಗಳ ರಸ್ತೆಗಳ ಮೂಲಕ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ವಲಸೆ ಕಾರ್ಮಿಕರ ನೋವಿಗೆ ಮಿಡಿಯುವ ಉದ್ದೇಶದಿಂದ ಅವರಿಗೆ ಆಹಾರ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ.
ಇದರ ನಡುವೆ ಜಮ್ಮು ಮತ್ತು ಕಾಶ್ಮೀರದ ಸಿಆರ್ಪಿಎಫ್ನಿಂದ ಬಡವರಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಔಷಧ, ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸುವ ಕೆಲಸದಲ್ಲಿ ತೊಡಗಿದೆ. ಇನ್ನು ಶ್ರೀನಗರದ ಸಿಆರ್‌ಪಿಎಫ್‌ನ 49 ಬೆಟಾಲಿಯನ್, ಜನರಿಗೆ ಕೈಯಿಂದ ಹೊಲಿದ ಮಾಸ್ಕ್, ಸ್ಯಾನಿಟೈಜರ್‌ಗಳು ಮತ್ತು ಇತರ ಅಗತ್ಯ ಸೇವೆಗಳನ್ನು ವಿತರಿಸುತ್ತಿದೆ.
ಶ್ರೀನಗರದಲ್ಲಿ ಅನೇಕ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುವ ಮೂಲಕ ನಾವು ಸಾಧ್ಯವಿರುವ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇವೆ. ಸಿಆರ್‌ಪಿಎಫ್ ವೈದ್ಯರು ನಾಗರಿಕ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಕಾರಣ, ನಮ್ಮ ವೈದ್ಯರು ನಾಗರಿಕ ವೈದ್ಯರೊಂದಿಗೆ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಸಿಆರ್‌ಪಿಎಫ್‌ನ ವಕ್ತಾರ ಅಲೋಕ್ ಶ್ರೀವಾಸ್ತವ್ ಮಾಹಿತಿ ನೀಡಿದರು.
ಶ್ರೀನಗರ ವಲಯದ ಸಿಆರ್‌ಪಿಎಫ್‌ನ 117 ಬೆಟಾಲಿಯನ್ ವಕ್ತಾರರು ಮಾತನಾಡಿ, ಅಗತ್ಯವಿರುವವರಿಗೆ ಸಹಾಯ ಮಾಡಲು ಯಾವುದೇ ರೀತಿಯ ಸಂಪನ್ಮೂಲಗಳನ್ನು ನಾವು ಒದಗಿಸಲು ಸಿದ್ಧ ಎಂದು ಹೇಳಿದ್ದಾರೆ.
ಮಾರಣಾಂತಿಕ ಕೊರೊನಾ ವೈರಸ್ ಗೆ ಹೆದರದೆ ನಮ್ಮ ಜವಾನರು ಜನರ ರಕ್ಷಣೆಗೆ ಮುಂದಾಗಿದ್ದಾರೆ. ಈ ಕಾರಣದಿಂದ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.