ಪ್ರಸ್ತುತ ದೇಶದಲ್ಲಿ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯು ಶ್ರೀಸಾಮಾನ್ಯರ ಕೈಗೆ ಎಟುಕದಂತಾಗಿದೆ. ಒಂದೆಡೆ ಕೋಟ್ಯಂತರ ಸಂತ್ರಸ್ತರು ನ್ಯಾಯದ ಬಾಗಿಲಲ್ಲಿ ಕಾದು ಕುಳಿತಿದ್ದರೆ ಮತ್ತೊಂದೆಡೆ ಅಪರಾಧಗಳ ಪ್ರಮಾಣ ಯಾವ ಪರಿಯಲ್ಲಿ ಹೆಚ್ಚುತ್ತಿದೆಯೆಂದರೆ ಅಪರಾಧಿಗಳನ್ನು ನ್ಯಾಯ ವ್ಯವಸ್ಥೆಗೆ ಒಗ್ಗಿಸುವುದು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿದೆ. ಈ ಸ್ಥಿತಿಯ ದುರ್ಲಾಭ ಪಡೆಯುತ್ತಿರುವವರು ಪದೆಪದೇ ಅಪರಾಧ ಎಸಗುತ್ತಿದ್ದಾರೆ. ಉತ್ತರ ಪ್ರದೇಶದ ‘ಉನ್ನಾವೊ’ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರ ಆರೋಪಿಗಳು ಪೆಟ್ರೋಲ್ ಸುರಿದು ಬೀದಿಯಲ್ಲಿ ಬೆಂಕಿ ಹಚ್ಚಿ ಕೊಂದು ಹಾಕಿದ ಇತ್ತೀಚಿನ ಘಟನೆಯು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸಂತ್ರಸ್ತರಿಗೆ ತಕ್ಷಣದಲ್ಲಿ ನ್ಯಾಯ ಒದಗಿಸಲಾರದ ದುಸ್ಥಿತಿಯಲ್ಲಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯವು ಭಾರತೀಯ ದಂಡ ಸಂಹಿತೆ (IPC) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಕಾಯ್ದೆಗಳಲ್ಲಿ ದೊಡ್ಡ ಮಟ್ಟದ ಸುಧಾರಣೆಗಳಿಗೆ ಮುಂದಾಗಿರುವುದು ಶ್ರೀಸಾಮಾನ್ಯನ ದುಗುಡ ದುಮ್ಮಾನಗಳನ್ನು ಅದು ಕೇಳಿಸಿಕೊಂಡಿರಬಹುದೇ ಎಂಬ ಭರವಸೆಗೆ ಕಾರಣವಾಗಿದೆ. ಹಾಗೆಯೇ, ದೇಶದ ನಾಗರಿಕರ ಸುರಕ್ಷತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಈಗಿರುವ ಕಾನೂನಿನಲ್ಲಿ ತರಬೇಕಾದ ಬದಲಾವಣೆ ಕುರಿತಂತೆ ಕೇಂದ್ರ, ರಾಜ್ಯ ಸರ್ಕಾರಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯಗಳನ್ನು ಸಹ ಆಹ್ವಾನಿಸಿದೆ.
ಕಾನೂನು ಸುಧಾರಣೆಯ ಈ ಕೆಲಸವು ಎಲ್ಲ ಜನತೆಗೆ ಅದರಲ್ಲೂ ವಿಶೇಷವಾಗಿ ದುರ್ಬಲ ವರ್ಗಗಳಿಗೆ ಕಾನೂನಿನ ಬೆಂಬಲ ಪಡೆದು, ಆಧುನಿಕ ಪ್ರಜಾತಾಂತ್ರಿಕ ಆಶೋತ್ತರಗಳಿಗೆ ಪೂರಕವಾಗಿ ತಕ್ಷಣ ನ್ಯಾಯ ಪಡೆದುಕೊಳ್ಳುಲು ಅನುವು ಮಾಡಿಕೊಡಲಿದೆ ಎಂದು ಗೃಹ ಸಚಿವಾಲಯವು ತಿಳಿಸಿದೆ. ಅನೇಕ ಕಾನೂನು ತಜ್ಞರ ಪ್ರಕಾರ 1860ರಲ್ಲಿ ಬ್ರಿಟಿಷರು ರೂಪಿಸಿದ್ದ IPC ಕಾಯ್ದೆ ಮತ್ತು 1872ರಲ್ಲಿ ರೂಪಿಸಿದ್ದ ಸಾಕ್ಷ್ಯ ಅಧಿನಿಯಮಗಳು ಸಮಾಜದ ಇಂದಿನ ಅಗತ್ಯಗಳಿಗೆ ಅನುಗುಣವಾಗಿಲ್ಲ. ಈ ಕಾನೂನುಗಳಲ್ಲಿ ಅಪರಾಧಿಗಳು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಹ ಅವಕಾಶಗಳು ಅಬಾಧಿತವಾಗಿವೆ.
ನ್ಯಾಯದಾನದಲ್ಲಿನ ವಿಳಂಬವು ನ್ಯಾಯವನ್ನೇ ನಿರಾಕಿಸುತ್ತದೆ. ಅಷ್ಟು ಮಾತ್ರವಲ್ಲ ನ್ಯಾಯಬದ್ಧವಾದ ನ್ಯಾಯಾಂಗ ವ್ಯವಸ್ಥೆಯ ಸಂಪೂರ್ಣ ವಿನಾಶಕ್ಕೂ ಕಾರಣವಾಗುತ್ತದೆ ಎಂದು ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರು ಈ ಹಿಂದೆ ಎಚ್ಚರಿಸಿದ್ದರು. ಅವರ ಹೇಳಿಕೆ ಪ್ರಾಮುಖ್ಯತೆ ಮನಗಂಡು ಹಿಂದಿನ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರು ಕ್ರಿಮಿನಲ್ ಕಾನೂನನ್ನು ತಕ್ಷಣದಲ್ಲಿ ಸರಿಪಡಿಸುವ ಅಸ್ಥೆ ತೋರಿಸಿದ್ದರು. ಕಾನೂನು ಸುಧಾರಣೆ ಪ್ರಾಮುಖ್ಯತೆಯನ್ನು ಈ ಇಬ್ಬರು ಮಾಜಿ ಪ್ರಧಾನಿಗಳು ಒತ್ತಿ ಹೇಳಿದ್ದರು. ಆದರೆ ಅವರ ಘೋಷಣೆಗಳು ಘೋಷಣೆಗಳಾಗಿಯೇ ಉಳಿದು ಸಮಿತಿ ರಚನೆ ಹಂತವನ್ನು ದಾಟಿ ಮುಂದೆ ಹೋಗಲಿಲ್ಲ ಎಂಬುದು ದುರದೃಷ್ಟಕರ.
ಕ್ರಿಮಿನಲ್ ನ್ಯಾಯದ ಕಾನೂನುಗಳನ್ನು ಬಿಗಿಗೊಳಿಸುವ ಕುರಿತಂತೆ ಕೇಂದ್ರದ ಹಲವು ತಿಂಗಳು ಪ್ರಯತ್ನದ ನಂತರವೂ ಪ್ರತಿಸ್ಪಂದನೆ ದೊರೆತಿರುವುದು ಕರ್ನಾಟಕ, ಜಮ್ಮು ಮತ್ತು ಕಾಶ‍್ಮೀರ ಹಾಗೂ ಉತ್ತರ ಪ್ರದೇಶಗಳಿಂದ ಮಾತ್ರವೇ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ, ದೇಶದಲ್ಲಿ ಶಾಂತಿ ಹಾಗೂ ಪ್ರಗತಿ ಸಾಧಿಸುವ ಸಮಾನ ಗುರಿಯನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಲು ಈಗ ಸೂಕ್ತ ಸಮಯ.
ಆಧುನಿಕ ಕಾನೂನು ಶಿಕ್ಷಣದ ಪಿತಾಮಹ ಎನಿಸಿಕೊಂಡಿರುವ ಎನ್.ಆರ್.ಮಾಧವ್ರಾವ್ ಅವರು 2016ರಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ ‘ನಾಗರಿಕರ ಸಂಪತ್ತು ಮತ್ತು ಜೀವಗಳಿಗೆ ಭದ್ರತೆ ಒದಗಿಸುವ ಖಾತ್ರಿ ನೀಡುವ ಗುರಿ ಹೊಂದಿರುವ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ತಮ್ಮ ಗುರಿ ಸಾಧನೆ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲು ವಿಫಲವಾಗಿದೆ. ಸೂಕ್ತ ನ್ಯಾಯಿಕ ಪ್ರಕ್ರಿಯೆಯಲ್ಲಿ ಹಾಗೂ ಶಿಕ್ಷೆ ವಿಧಿಸುವಲ್ಲಿ ಅತಿಯಾದ ವಿಳಂಬಗಳು ಅಪರಾಧಿಗಳು ಪುನಃ ಪುನಃ ಅಪರಾಧವೆಸಗಲು ಕುಮ್ಮಕ್ಕು ನೀಡುತ್ತಿವೆ’ ಎಂದಿದ್ದರು. ಹಲವು ಬುದ್ಧಿಜೀವಿಗಳ ಅಭಿಪ್ರಾಯದಂತೆ ಈಗಿರುವ ಕಾನೂನಿನಲ್ಲಿ ಪೊಲೀಸರಿಗೆ ಮತ್ತು ಪ್ರಾಸಿಕ್ಯೂಶನ್‍ಗೆ ನೀಡಲಾಗಿರುವ ಹೆಚ್ಚಿನ ಮಟ್ಟದ ವಿವೇಚನಾ ಅಧಿಕಾರವು ಬಲಾಢ್ಯರು ನ್ಯಾಯ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿ ಮುಗ್ಧ ನಾಗರಿಕರ ಮೂಲಭೂತ ಹಕ್ಕುಗಳನ್ನೇ ನಾಶಗೊಳಿಸಲು ಸಹಕಾರಿಯಾಗಿವೆ.
ದೇಶದ ನ್ಯಾಯ ವ್ಯವಸ್ಥೆಯಲ್ಲಿನ ಈ ದುಸ್ಥಿತಿಯನ್ನು ಕೊನೆಗೊಳಿಸಲು 2000ನೇ ಇಸವಿಯಲ್ಲಿ, ವಾಜಪೇಯಿ ನೇತೃತ್ವದ ಸರ್ಕಾರವು ಜಸ್ಟೀಸ್ ಮಳೀಮಠ್ ಅವರ ನೇತೃತ್ವದಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು 2003ರ ಏಪ್ರಿಲ್ ತಿಂಗಳಿನಲ್ಲಿ ಒಂದು ಮುಖ್ಯವಾದ ವರದಿ ನೀಡಿತ್ತು. ಆ ವರದಿಯಲ್ಲಿ ನ್ಯಾಯಾಂಗ, ಪೊಲೀಸ್ ಇಲಾಖೆ ಮತ್ತು ವಿವಿಧ ತನಿಖಾ ಸಂಸ್ಥೆಗಳ ನಡುವೆ ಒಂದು ಅರ್ಥಪೂರ್ಣ ಹಾಗೂ ಜವಾಬ್ದಾರಿಯುತ ಸಂವಹನ, ಸಮನ್ವಯ ಸಾಧ್ಯವಾಗಿಸುವ ನಿಟ್ಟಿನಲ್ಲಿ 158 ಶಿಫಾರಸುಗಳನ್ನು ಮಾಡಲಾಗಿತ್ತು. 'ಸತ್ಯದ ಶೋಧನೆ'ಯ ಮಾರ್ಗದರ್ಶಿ ಸೂತ್ರವೇ ಇಡೀ ನ್ಯಾಯಾಂಗ ವ್ಯವಸ್ಥೆಯ ಅಡಿಗಲ್ಲಾಗಬೇಕು ಎಂದೂ ಜಸ್ಟೀಸ್ ಮಳಿಮಠ್ ಸಮಿತಿ ತಾಕೀತು ಮಾಡಿತ್ತು.
ಎನ್.ಆರ್.ಮಾಧವ್ ಮೆನನ್ ಸಮಿತಿ ಸಹ ನಾಲ್ಕು ವರ್ಷಗಳ ಕಾಲ ರಾಷ್ಟ್ರೀಯ ನೀತಿ ನಿರೂಪಣೆ ರೂಪುರೇಷೆ ಸಲ್ಲಿಸಿತ್ತು. ಅದರಲ್ಲಿ ನಾಲ್ಕು ಜಿಲ್ಲಾ ಸಂಹಿತೆಗಳೆಂದು ವಿಭಾಗಿಸಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಪರಿಣಾಮಕಾರಿ ನಿರ್ವಹಣೆಯ ಕುರಿತು ಹೇಳಲಾಗಿತ್ತು.
ದೇಶವನ್ನು ತಲ್ಲಣಗೊಳಿಸಿದ ನಿರ್ಭಯಾ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ನೇಮಿಸಿದ್ದ ಜಸ್ಟೀಸ್ ಜೆ.ಎಸ್.ವರ್ಮಾ ಸಮಿತಿಯಲ್ಲಿ ಸಹ ಹಲವಾರು ಅಮೂಲ್ಯ ಸಲಹೆಗಳಿವೆ. ನ್ಯಾಯದಾನ ವ್ಯವಸ್ಥೆ ತ್ವರಿತಗತಿಯ ಸುಧಾರಣೆ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಇಂದಿನ ಕಾಲಮಾನದಲ್ಲಿ ಅಪರಾಧಗಳ ಬದಲಾಗಿರುವ ಸ್ವರೂಪ ಮತ್ತು ಅಂತಾರಾಷ್ಟ್ರೀಯ ಮಟ್ಟದ ನೀತಿ ನಿರೂಪಣೆಗಳಲ್ಲಿ ಸುಧಾರಣೆಗಳನ್ನು ಗಮನದಲ್ಲಿರಿಸಿಕೊಂಡು ನಮ್ಮ ದೇಶದ ಕ್ರಿಮಿನಲ್ ಕಾನೂನಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ.
ದಿನೆದಿನೇ ನ್ಯಾಯ ವ್ಯವಸ್ಥೆ ಕುಸಿಯುತ್ತಾ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಅಗಾಧವಾಗಿ ಬೆಳೆಯುತ್ತಿರುವ ಕಾರಣದಿಂದ ಬಲಾಢ್ಯ ಕ್ರಿಮಿನಲ್‍ಗಳು ಸುಲಭವಾಗಿ ಜಾಮೀನು ಪಡೆದುಕೊಂಡು ಸಮಾಜದಲ್ಲಿ ರಾಜಾರೋಷವಾಗಿ ತಿರುಗಾಡುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಅದೇ ವೇಳೆಗೆ ಬಲಾಢ್ಯರಲ್ಲದ ಚಿಕ್ಕಪುಟ್ಟ ಕ್ರಿಮಿನಲ್‍ಗಳಷ್ಟೇ ಬಲಿಪಶುಗಳಾಗಿ ಬಿಡುತ್ತಿದ್ದಾರೆ. ಅಮೆರಿಕದಂತಹ ಮೊದಲ ಜಗತ್ತಿನ ದೇಶಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆ ಸುಧಾರಣೆ ವಿಷಯದಲ್ಲಿ ಕಾಲಕಾಲಕ್ಕೆ ಪ್ರಗತಿ ಸಾಧಿಸುತ್ತಿವೆ. ಇದು ಕಾನೂನು ಆಡಳಿತದ ದೃಷ್ಟಿಯಿಂದಲೂ ಅತ್ಯಗತ್ಯ.
ಪ್ರಪಂಚ ಮಟ್ಟದ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಸೂಚ್ಯಂಕದಲ್ಲಿ ಒಟ್ಟು 128 ದೇಶಗಳ ಪೈಕಿ ಭಾರತ 68ನೇ ಸ್ಥಾನದಲ್ಲಿದೆ. ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲು ಅಗತ್ಯ ಸ್ವಾತಂತ್ರ್ಯ ಹೊಂದಿರದಿದ್ದ ಮಾಧವನ್ ಮೆನನ್ ಸಮಿತಿ “ರಾಷ್ಟ್ರಮಟ್ಟದಲ್ಲಿ ಕಾನೂನು ಜಾರಿ ಸಂಸ್ಥೆಯು ಸ್ವತಂತ್ರವಾಗಿರಬೇಕಲ್ಲದೇ ಅದು ನ್ಯಾಯಾಲಯಕ್ಕೆ ಮಾತ್ರವೇ ಉತ್ತರದಾಯಿತ್ವ ಹೊಂದಿರಬೇಕು, ಬೇರಾರಿಗೂ ಅಲ್ಲ” ಎಂದು ಸಲಹೆ ನೀಡಿತ್ತು. ಜಸ್ಟೀಸ್ ಮಳೀಮಠ್ ಸಮಿತಿಯು, ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಇರುವಂತೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಆದವರಿಗೆ ಕ್ರಿಮಿನಲ್ ತನಿಖೆಗಳ ಮೇಲ್ವಿಚಾರಣೆಯ ಅಧಿಕಾರವಿರಬೇಕು ಎಂಬ ಶಿಫಾರಸು ನೀಡಿತ್ತು. ಮಳೀಮಠ್ ಸಮಿತಿಯ ಪ್ರಸ್ತಾವಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಅದರ ಕೆಲವು ವಿವಾದಾತ್ಮಕ ವಿಷಯಗಳ ಕುರಿತು ವ್ಯಾಪಕ ಚರ್ಚೆಗಳಿಗೆ ಅವಕಾಶ ಒದಗಿಸಬೇಕು. ಅಲ್ಲದೇ ಮಿಕ್ಕ ಪ್ರಸ್ತಾವಗಳನ್ನು ನ್ಯಾಯಬದ್ಧಗೊಳಿಸಲು ಅಗತ್ಯ ಸಿದ್ಧತೆ ನಡೆಸಬೇಕು.
ಬಹುಕಾಲದಿಂದಿರುವ ಕ್ರಿಮಿನಲ್ ನ್ಯಾಯದ ನಿಯಮಯಗಳಿಗೆ ಮನ್ನಣೆ ಒದಗಿಸಿಕೊಂಡು ಆಧುನಿಕ ತಂತ್ರಜ್ಞಾನದ ಸಂಪೂರ್ಣ ಬೆಂಬಲದೊಂದಿಗೆ ಅಪರಾಧಿಗಳಿಗೆ ಶಿಕ್ಷೆ ವಿಧಿಸುತ್ತಾ ತನಿಖೆಗಳ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದು ಕೇಂದ್ರ ಮತ್ತು ರಾಜ್ಯಗಳ ಭದ್ರತಾ ವ್ಯವಸ್ಥೆ ಸುಧಾರಿಸುವಷ್ಟೇ ಪ್ರಾಮುಖ್ಯತೆ ಹೊಂದಿರುವ ವಿಷಯವಾಗಿರುವುದನ್ನು ಮನಗಾಣಬೇಕಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನ್ಯಾಯಾಂಗ ವ್ಯವಸ್ಥೆ ಸುಧಾರಿಸದಿದ್ದರೆ ಪ್ರಪಂಚದ ಅತ್ಯುನ್ನತ ಪ್ರಜಾಪ್ರಭುತ್ವವು ತೀರಾ ಅಪಾಯದ ಅಂಚಿಗೆ ತಳ್ಳಲ್ಪಡುವುದಂತೂ ಕಟ್ಟಿಟ್ಟ ಬುತ್ತಿ.