ತಿರುವನಂತಪರಂ: ದೇಶದಲ್ಲಿ ಸಂಚಲನ ಮೂಡಿಸಿದ್ದ ಒಂದೇ ಕುಟುಂಬದ ಆರು ಮಂದಿಗೆ ವಿಷ ಉಣಿಸಿ ಹತ್ಯೆ ಮಾಡಿದ್ದ ಸರಣಿ ಹಂತಕಿ ಇದೀಗ ಕೇರಳ ಪೊಲೀಸರ ವಶವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಕೆಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಆರೋಪಿ ಮಹಿಳೆ ಜೂಲಿ ಹಾಗೂ ಆಕೆಯ ಎರಡನೇ ಗಂಡ ಶಾಜು ಹಾಗೂ ಇವರಿಗೆ ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು, 2002ರಿಂದ 2016ರವರೆಗೆ ಅಂದರೆ 14 ವರ್ಷಗಳ ಕಾಲ ಈ ಕೊಲೆಗಳು ನಡೆದಿರುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಇವರಿಗೆ ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರನ್ನು ಕೂಡ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ಅವರಿಂದ ಮಹತ್ವದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಕ್ರೈಂ ಬ್ರಾಂಚ್ ಇನ್ನೂ ಹೆಚ್ಚಿನ ಆರೋಪಿಗಳನ್ನ ಈ ಪ್ರಕರಣದಲ್ಲಿ ಬಂಧನ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಜೂಲಿ ಎರಡನೇ ಗಂಡ ಶಾಜು ಸಹ ತನ್ನ ಹೆಂಡತಿ ಹಾಗೂ ಮಗುವನ್ನ ಇದೇ ರೀತಿಯಾಗಿ 2011ರಲ್ಲಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ಇದಾದ ಬಳಿಕ ಇವರಿಬ್ಬರು ಸೇರಿ ಅತ್ತೆ ಅಣ್ಣಮ್ಮ ಥಾಮಸ್ (57) , ಮಾವ ಟಾಮ್ ಥಾಮಸ್, ಪತಿ ರಾಯ್ ಥಾಮಸ್, ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67), ಸಿಲಿ(27), ಹೆಣ್ಣು ಮಗು ಅಲ್ಫೋನ್ಸನನ್ನು ಕೊಲೆ ಮಾಡಿದ್ದರು.
ಸದ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ಮೃತರ ವೈಜ್ಞಾನಿಕ ಪರೀಕ್ಷೆಗಳ ವರದಿ ಪೊಲೀಸರ ಕೈ ಸೇರಿದ್ದು, ವ್ಯಕ್ತಿಗಳು ಸಾವಿನ ವೇಳೆ ಜೂಲಿ ಸ್ಥಳದಲ್ಲೇ ಇದ್ದಳೆಂದು ತಿಳಿದು ಬಂದಿದೆ. ಜತೆಗೆ ಆಹಾರದಲ್ಲಿ ಕೆಲವೊಂದು ವಿಷಕಾರಕ ವಸ್ತು ಬೇರಿಸಿ ಅವರಿಗೆ ನೀಡಿದ್ದಾಳೆಂದು ತಿಳಿದು ಬಂದಿದೆ.
ಪತಿ ಸಾವನ್ನಪ್ಪುತ್ತಿದ್ದಂತೆ ಜೂಲಿ ಮೃತ ಸಿಲಿ ಪತಿಯನ್ನು ಮದುವೆಯಾಗಿ ಕುಟುಂಬ ಅಸ್ತಿ ತಮಗೆ ಸೇರಬೇಕು ಎಂದು ಕಾನೂನಿನ ಅನ್ವಯ ಮನವಿ ಸಲ್ಲಿಸಿದ್ದಳು. ಆದರೆ ಟಾಮ್ ಥಾಮಸ್ ಕಿರಿಯ ಪುತ್ರನ ಮಗ ಮೆಜೊ ಇದಕ್ಕೆ ಆಕ್ಷೇಪಣೆ ಸಲ್ಲಿಸಿ ಕುಟುಂಬದ ಸದಸ್ಯರ ಸರಣಿ ಸಾವಿನ ಕುರಿತು ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡಾಗ ಈ ಮಹತ್ವದ ಮಾಹಿತಿ ಹೊರಬಿದ್ದಿದೆ.