ಮಹಿಳೆಯರು ಮತ್ತು ಹುಡುಗಿಯರಲ್ಲಿ ಋತುಚಕ್ರಕ್ಕೆ ಅಡ್ಡಿಪಡಿಸುವ ಒಂದು ಪ್ರಮುಖ ಅಂಶವೆಂದರೆ ಒತ್ತಡ. ಎಲ್ಲೆಡೆ ಕೋವಿಡ್-19 ಆತಂಕ ಹರಿದಾಡುತ್ತಿರುವ ಕಾರಣ ಕೆಲ ಮಹಿಳೆಯರು ತಮ್ಮ ಮುಂದಿನ ಋತುಚಕ್ರ ಅವಧಿಗೆ ಸ್ವಲ್ಪ ವಿಳಂಬವನ್ನು ಅನುಭವಿಸುವುದು ಸಹಜ.
"ಒತ್ತಡವು ಋತುಚಕ್ರವನ್ನು ವಿಳಂಬಗೊಳಿಸುತ್ತದೆ ಎಂಬುದು ತಿಳಿದಿರುವ ವಿಚಾರ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಹೆಣ್ಣುಮಕ್ಕಳಲ್ಲಿ ಋತುಚಕ್ರ ವಿಳಂಬವಾಗಿ ಪರೀಕ್ಷೆಗಳು ಮುಗಿದ ನಂತರ ಎಂದಿನಂತೆ ಮತ್ತೆ ಸರಿಯಾಗಿ ಮುಂದುವರೆಯುವುದನ್ನೂ ನೋಡಿದ್ದೇವೆ. ಮುಟ್ಟಿನ ಚಕ್ರದ ಹಾರ್ಮೋನುಗಳು ಮೆದುಳಿನಿಂದ ಬಿಡುಗಡೆಯಾಗುತ್ತವೆ. ಆದರೆ, ಒತ್ತಡದ ಮಟ್ಟದಲ್ಲಿನ ಹೆಚ್ಚಳವು ಗೊಂದಲಕ್ಕೆ ಕಾರಣವಾಗಿ ವಿಳಂಬಕ್ಕೀಡು ಮಾಡಬಹುದು" ಎಂದು ಮುಂಬೈನ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಪ್ರಸೂತಿ ತಜ್ಞೆ ಮತ್ತು ಸ್ತ್ರೀರೋಗ ತಜ್ಞೆಯಾಗಿರುವ ಹಿರಿಯ ಸಲಹೆಗಾರ್ತಿ ಡಾ. ಮೇಘನಾ ಡಿ. ಸರ್ವಾಯಾ ಐಎಎನ್‌ಎಸ್ ಲೈಫ್‌ಗೆ ತಿಳಿಸಿದರು.
ವೈದ್ಯರನ್ನು ಸಂಪರ್ಕಿಸುವ ಮೊದಲು, ನಿಮ್ಮ ನಿಗದಿತ ದಿನಾಂಕದ ನಂತರ ಕನಿಷ್ಠ 7-10 ದಿನಗಳವರೆಗೆ ಕಾಯುವಂತೆ ವೈದ್ಯರು ಸೂಚಿಸುತ್ತಾರೆ. ಹೇಗಾದರೂ, ವೈರಸ್ ಸೋಂಕಿನ ಭಯ ಮತ್ತು ಒತ್ತಡವು ಅಂತಿಮವಾಗಿ ಕಡಿಮೆಯಾಗುತ್ತದೆ. ಆದರೆ, ಅದರ ನಂತರ ಉದ್ಯೋಗ, ಹಣಕಾಸು ಸಮಸ್ಯೆ, ಮಕ್ಕಳ ಶಿಕ್ಷಣ ವೆಚ್ಚಗಳು, ಪಿಂಚಣಿ ಉಳಿತಾಯ ಮತ್ತು ಜೀವನಶೈಲಿಯ ಬಗೆಗಿನ ಆತಂಕದ ಅಲೆಗಳು ಮುಂದಿನ ಋತುಚಕ್ರದ ವಿಳಂಬವನ್ನು ಪ್ರಚೋದಿಸುವ ಸಾಧ್ಯತೆ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಆಯುರ್ವೇದವು ಒತ್ತಡವನ್ನು ನಿರ್ವಹಿಸಲು ಮತ್ತು ಮುಟ್ಟಿನ ಚಕ್ರಗಳನ್ನು ನಿಯಮಿತವಾಗಿಡಲು ನಿಮಗೆ ಹೇಗೆ ಸಹಾಯ ಮಾಡುತ್ತದೆ:
ಶತಾವರಿ ಸಸ್ಯ ಇಂತಹ ಋತುಚಕ್ರ ಸಮಸ್ಯೆಗಳಿಗೆ ಅದ್ಭುತ ರಾಮಬಾಣವಾಗಿದೆ. ಒಂದು ಟೀ ಸ್ಪೂನ್ ಶತಾವರಿ ರೂಟ್ ಪೌಡರ್ ತೆಗೆದುಕೊಂಡು ಅದನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಅದರ ತಿಳಿಗೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ಕುಡಿಯಬೇಕು. ಇದು ಮಹಿಳೆಯರಿಗೆ ಸಮತೋಲಿತ ಮುಟ್ಟನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮುಟ್ಟಿನ ತೊಂದರೆಗಳನ್ನು ಸರಾಗಗೊಳಿಸುತ್ತದೆ. ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.